ರವಿವಾರ ೬ ಸಪ್ಟೆಂಬರ್ ೨೦೦೯

ನೇಗಿಲಯೋಗಿಯ ಕತೆಯ ಕೇಳಿಲ್ಲಿ . .. . .



ಆತ ರೈತ .
ದೇಶದ ಬೆನ್ನೆಲುಬು.. ಅನ್ನ ನೀಡುವ ಅನ್ನದಾತ . . .ಪ್ರಾಣ ರಕ್ಷಕ ಹೀಗೆ ಏನೆಲ್ಲಾ ವಿಶೇಷಣಗಳನ್ನು ಆತನಿಗೆ ನೀಡಬಹುದೋ ಅದೆಲ್ಲವೂ ಆತನಿಗೆ ನೀಡಬಹುದು. ಆದರೆ ಆತನ ಜೀವನ ಮಟ್ಟ ಸುಧಾರಿಸದು.. ಹಾಗಾದ್ರೆ ಏನು ಮಾಡಬಹುದು ..? ಆತನಿಗಾಗಿ ಏನನ್ನು ಯೋಚಿಸಬಹುದು..? ಏನನ್ನೂ ಇಲ್ಲ..! ನಿಜಕ್ಕೂ ಇದು ಸತ್ಯ. ಅಂತಹ ಒಂದು ಘಟನೆಯೊಂದು ಇದೆ. ಇದಕ್ಕೂ ಮುನ್ನ ಒಂದು ಸಂಗತಿ.ಈಗಿನಂತೆ ಆಹಾರ ಬೆಳೆಯ ಕೊರತೆಯಾದರೆ 2050 ರವೇಳೆಗೆ ಏಷ್ಯಾದ ಅನೇಕ ಕಡೆಗಳಲ್ಲಿ ಆಹಾರದ ಸಮಸ್ಯೆ ತೀವ್ರವಾಗಿ ಕಾಡಲಿದೆ ಎಂಬ ವರದಿಯೊಂದು ಬಂದಿದೆ.ಆಗ ರೈತ ನೆನಪಾಗುತ್ತಾನೆ. ಆದರೆ ಆಗ ಆತನೇ ಇರುವುದಿಲ್ಲವಂತೆ...!!

ಮೊನ್ನೆ ರೈಲಲ್ಲಿ ಹೋಗುತ್ತಿದ್ದೆವು. ಯಾರೋ ಒಬ್ಬರು ಪ್ರಯಾಣಿಕರು ಮಾತನಾಡುತ್ತಿದ್ದರು. ಅವರು ಹೇಳುತ್ತಿದ್ದ ವಿಚಾರ ರೈತನದ್ದಾಗಿತ್ತು. ನಿಜಕ್ಕೂ ಅವರು ಹೇಳುತ್ತಿರುವ ಸಂಗತಿಯ ಒಳಹೋದರೆ ಅದು ಕಾನೂನು ಪರಿಧಿಯೊಳಗೆ ಸರಿಯಿತ್ತು. ಆದರೆ ಅದರ ಹೊರತಾಗಿ ಅಂದರೆ ದೇಶದ ವ್ಯವಸ್ಥೆಯ ಒಳಗೆ ನೋಡಿದಾಗ ಹಾಗಾಗಬಾರದಿತ್ತು ಅಂತ ಅನ್ಸುತ್ತೆ.ಆತ ರೈತ, ಸುಮಾರು 60 ರಿಂದ 70 ವರ್ಷದ ಒಳಗಿನ , ಹೊಲದಲ್ಲಿ ಕೆಲಸ ಮಾಡಿದ ಜೀವ. ಆತನಿಗೆ ಹಾಸನಕ್ಕೆ ಬರುವುದಕ್ಕಿತ್ತು. ರೈಲಲ್ಲಿ ಟಿಕೆಟ್ ಪಡೆದಿದ್ದ. ಆತನಿಗೆ ಯಾರೋ ಹೇಳಿದರಂತೆ ನೀವ್ಯಾಕೆ ಆ ರೈಲಲ್ಲಿ ಹೋಗುತ್ತೀರಿ. ನೋಡಿ ಈ ರೈಲಲ್ಲಿ ಹೋಗಿ. ಇದು ನಿಮಗೆ ಹತ್ತಿರವಾಗುತ್ತದೆ ಎಂದರಂತೆ. ಹಾಗಾಗಿ ಆತ ಈ ರೈಲ್ಲನ್ನು ಏರಿದ. ಹಾಗೆ ರೈಲು ಮುಂದೆ ಹೋಯಿತು. ಟಿಕೆಟ್ ಚಕ್ಕಿಂಗ್‌ಗೆ ಅಧಿಕಾರಿ ಬಂದ. ಈ ರೈತ ಟಿಕೆಟ್ ನೀಡಿದ್ದೇ ತಡ. ನೀವ್ಯಾಕೆ ಈ ರೈಲಲ್ಲಿ ಬಂದದ್ದು ..ಇಳೀರಿ..ಇಳೀರಿ.. ಇಲ್ಲಿಂದ 45 ರುಪಾಯಿ ಕೊಟ್ಟು ಬಸ್ಸು ಏರಿ ಅಲ್ಲಿಗೇ ಹೋಗಿ ...ಇನ್ನೊಂದು ರೈಲಲ್ಲಿ ಬನ್ನಿ ಎಂದು ಗದರಿಸತೊಡಗಿದ. ಕಂಗಾಲಾದ ರೈತ ಹೇಳಿದ ನೋಡಿ ಸ್ವಾಮಿ ನಾನು ಟಿಕೆಟ್ ಮಾಡಿದ್ದೇನೆ. ನಂಗೊತ್ತಿಲ್ಲ ಯಾರೋ ಹೇಳಿದ್ರು ಇದರಲ್ಲಿ ಹೋಗಿ ಅಂತ. ಇನ್ನು ನನ್ನಲ್ಲಿ ಇರುವುದು 20 ರುಪಾಯಿ ನಾನು ಹೇಗೆ ಹೋಗಲಿ ಅಂತ ಕೇಳಿದ. ಆದರೆ ರೈಲು ಅಧಿಕಾರಿ ಕೇಳಲೇ ಇಲ್ಲ. ಆಗ ಜನ ಸೇರಿದರು. ಆದರೂ ರೈಲು ಅಧಿಕಾರಿ ಕೇಳಲೇ ಇಲ್ಲ. ಅಂತೂ 50 ರುಪಾಯಿ ದಂಡ ಕಟ್ಟಲೇ ಬೇಕಾಯಿತು. ಅದನ್ನು ಯಾರೋ ಒಬ್ಬರು ಕೊಟ್ಟರು. ಅಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿತು. ಆದರೆ ವಿಷಯ ಅದಲ್ಲ..

ಈ ದೇಶ ರೈತನಿಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ...

ಈ ರಾಜ್ಯದಲ್ಲಿ ರೈತ ಗೀತೆ ಬಂದಿದೆ .. ನೇಗಿಲ ಯೋಗಿಯ ನೋಡಲ್ಲಿ ಅನುರಣಿಸುತ್ತಿದೆ...

ಶೇಕಡಾ 3 ರ ದರದಲ್ಲಿ ಸಾಲವಿದೆ.. ಉಚಿತ ವಿದ್ಯುತ್ ಇದೆ . . .

ಸಾವಯವ ಕೃಷಿಗೆ ಇನ್ನೂ ಸವಲತ್ತಿದೆ....

..... ಹೀಗೇ ಒಂದಲ್ಲ ಹತ್ತಾರು ಯೋಜನೆಗಳು ಸರಕಾರಗಳು ರೈತರಿಗಾಗಿ ಹಾಕಿಕೊಳ್ಳುತ್ತಿದೆ.
ಯಾಕಾಗಿ...?. ಪ್ರಚಾರಕ್ಕಂತೂ ಅಲ್ಲ. ಓಟಿಗಾಗಿಯೂ ಇರಬಹುದು. ಆಧರೆ ಅದಕ್ಕಿಂತಲೂ ಹೆಚ್ಚು ಈ ದೇಶದ ಅನ್ನದಾತ ಆತ.ಒಂದು ವೇಳೆ ಆತ ಮಾರಾಟವನ್ನು ನಿಲ್ಲಿಸಿ ಸ್ವಂತಕ್ಕಾಗಿ ಮಾತ್ರವೇ ಅಕ್ಕಿ ತಯಾರಿಸಿದ ಎಂದು ಇಟ್ಟುಕೊಳ್ಳಿ ದೇಶದ ಸ್ಥಿತಿ ಏನಾದೀತು..? ಒಂದು ಕ್ಷಣ ಯೋಚಿಸಿ..? ಹಾಗಿದ್ದರೂ ಈ ಅಧಿಕಾರಿಗೆ ಕೊಂಚವಾದರೂ ಮಾನವೀಯತೆ ಬೇಡವೇ ಎಂಬುದು ಒಂದು ಪ್ರಶ್ನೆ. ಸರಕಾರ ನಿಜಕ್ಕೂ ರೈತನ ಪ್ರಯಾಣಕ್ಕೆ ವಿಶೇಷವಾದ ವ್ಯವಸ್ಥೆ ಮಾಡಲಿ. ಎಲ್ಲಾ ಯೋಜನೆಗಳಂತೆ ಇದೂ ಕೂಡಾ ಆತನಿಗೆ ಸಿಗಲಿ. ಅಲ್ಲಿ ಅನಗತ್ಯವಾಗಿ ಮಂತ್ರಿಗಳ ಪ್ರಯಾಣಕ್ಕೆ ಖರ್ಚು ಮಾಡುವ ಸರಕಾರ ನೇಗಿಲಯೋಗಿಗೆ ನೀಡಲಿ.ಅಥವಾ ವರ್ಷಕ್ಕೆ ಒಂದಿಷ್ಟು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಿ.ಅದು ಬಿಟ್ಟು ಏನೂ ಅರಿಯದ ಟಿಕೆಟ್ ಪಡೆದಿದ್ದ ಆ ರೈತನ ಮೇಲೆ ದಂಡ ಕಟ್ಟು ಎಂದು ಹೇಳುವ ಆ ಅಧಿಕಾರಿಗೆ ಒಂದು ದಿನದ ಅನ್ನದ ಹಿಂದಿನ ಕಷ್ಠದ ಅರಿವು ಆಗಬೇಕು. ಆತನಿಗೆ 20 - 25 ರುಪಾಯಿಗೆ ಅಕ್ಕಿ ಸಿಗುತ್ತಲ್ಲಾ ಅದರ ಹಿಂದಿರುವ ದುಡಿಮೆ ಆತನಿಗೆ ಅರಿವಿಲ್ಲ. ತನಿಗೆ ಏನಿದ್ದರೂ ಇಲ್ಲಿ ರೈಲಲ್ಲಿ ಹೋಗಿ 20 - 25 ಸಾವಿರ ಎಣಿಸಿಯೇ ಗೊತ್ತು ವಿನಹ: ಒಂದು ತುತ್ತು ಅನ್ನದ ಹಿಂದಿರುವ ಕನಿಷ್ಠ ಗೊತ್ತಿಲ್ಲ. ಹಾಗಾಗಿ ಆತ ರೈತನಿಗೆ ದಂಡ ಕಟ್ಟಲು ಹೇಳಿದ್ದು.. . .

ಬಿಡಿ ಒಂದು ತುತ್ತು ಅನ್ನದ ಹಿಂದೆ ಎಷ್ಟು ಕಷ್ಟವಿದೆ ಎಂದು ಒಂದು ಕ್ಷಣ ಯೋಚಿಸಿನೋಡಿ. ಆದರೂ ನಾವು ಕೊಡುವುದು 20 - 27 ರುಪಾಯಿ. ಅದಲ್ಲ ಈ ಬೆಲೆ ಇನ್ನೂ ಏರಲಿದೆಯಂತೆ. ಏಕೆಂದರೆ ರೈತರ ಸಮಸ್ಯೆ ಕಡಿಮೆಯಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ವರ್ಷದಿಂದ ವರ್ಷಕ್ಕೆ ಅಕ್ಕಿಯ ಉತ್ಪಾದನೆ ಕಡಿಮೆಯಾಗುತ್ತಿದೆ. ಹೀಗೆ ಮುಂದುವರಿದರೆ 2050 ರ ವೇಳೆಗೆ ಆಹಾರದ ಸಮಸ್ಯೆ ಎದುರಾಗಲಿದೆ.ಇದಕ್ಕಾಗಿ ಈಗಲೇ ಕ್ರಮ ಕೈಗೊಳ್ಳದಿದ್ದಲ್ಲಿ ಭಾರೀ ಸಮಸ್ಯೆ ಎದುರಿಸಬೇಕಾದೀತು ಎಂದು ವರದಿ ಹೇಳಿದೆ. ಅದು ಬಿಡಿ ಈ ಬಾರಿ ಪ್ರಕೃತಿ ಮುನಿದ ಪರಿಣಾಮವಾಗಿ ಬಿಹಾರ, ಉತ್ತರಪ್ರದೇಶ , ಅಸ್ಸಾಂ, ಸೇರಿದಂತೆ ರಾಜ್ಯದ ವಿವಿದೆಡೆ ಭತ್ತದ ಉತ್ಪಾದನೆ ಶೇಕಡಾ 15 ರಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಈ ೧೧೦ ಕೋಟಿ ಜನರ ಹೊಟ್ಟೆ ತುಂಬಿಸುವ ಚಿಂತೆ ಎದುರಾಗಲಿದೆ.

ಇದೆಲ್ಲದರ ನಡುವೆಯೇ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡುತ್ತಿದ್ದವರೊಬ್ಬರು ಹೇಳುತ್ತಿದ್ದರು. ನಮ್ಮ ಹಿರಿಯರು ನಮಗೆ ಗದ್ದೆಗೆ ಇಳಿಯುದಕ್ಕೆ ಕಲಿಸಲಿಲ್ಲ ಕಂಪ್ಯೂಟರ್ ಗುಂಡಿಯನ್ನು ಅದುಮಲು ಹೇಳಿಕೊಟ್ಟರು ..., ನಮ್ಮ ಹಿರಿಯರು ಮನಗೆ ಮಣ್ಣಿನ ವಾಸನೆ ತೋರಿಸಿಲ್ಲ .. ,ನಮಗೆ ನಗರದ ವಾಸನೆ ತೋರಿಸಿದರು..., ಹೀಗಾಗಿ ಇಂದು ನಗರದಲ್ಲಿ ದಿಕ್ಕು ಕಾಣದಾದರೆ ಹಳ್ಳಿಗೆ ಬರಲೂ ಆಗದೆ ಸಂದಿಗ್ದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎನ್ನುತ್ತಾ.. ಇಂದಿನ ಆರ್ಥಿಕ ಸಂಕಷ್ಠದಲ್ಲಿ ನಗರದಲ್ಲಿ ಉದ್ಯೋಗ ಕಳೆದುಕೊಂಡರೆ ಹಳ್ಳಿಯಲ್ಲಿ ಬದುಕಲಾದ ಸ್ಥಿತಿ ಬಂದಿದೆ ಎಂದು ಅವರು ಹೇಳುತ್ತಿದ್ದಾಗ ಹಿಂದೆ ಕುಳಿತಿದ್ದ ಅಜ್ಜ ಹೌದು ಎಂದು ತಲೆದೂಗುತ್ತಿದ್ದರು. ಇನ್ನೊಬ್ಬರು ಹೇಳುತ್ತಿದ್ದರು ಕೃಷಿ ಇಂದು ಯಾಂತ್ರೀಕರಣವಾದಾಗ ಮಾತ್ರಾ ಕೃಷಿ , ರೈತ ಉಳಿದುಕೊಳ್ಳಲು ಸಾಧ್ಯ. ಆದರೆ ಇಂದು ನ್ಯಾನೋ ಕಾರು ಬರುತ್ತದೆ ಎಂದಾಗ ಭಾರೀ ಪ್ರಚಾರ ಸಿಗುತ್ತದೆ. ರೈತರೂ ಸೇರಿ ಎಲ್ಲರೂ ಕ್ಯೂನಲಿ ನಿಂತು ಕಾರಿಗೆ ಬುಕ್ ಮಾಡುತ್ತಾರೆ. ಆದರೆ ಕೃಷಿ ಉಪಕರಣವೊಂದು ಕಂಡುಹುಡುಕಿದರೆ ಅದನ್ನು ಕೇಳುವವರೇ ಇರುವುದಿಲ್ಲ. ಬುಕ್ ಮಾಡಿ ಎಂದರೆ ಜನರೇ ಬರುವುದಿಲ್ಲ ಎನ್ನುತ್ತಾರೆ.

ಇವೆರಡು ಸಂಗತಿಗಳ ನಡುವೆ ಗಿರಕಿಹೊಡೆಯುತ್ತಾ ಮುಂದೆ ಸಾಗಿದರೆ ಸರಕಾರ ಅನೇಕ ಯೋಜನೆಗಳನ್ನು ರೈತರಿಗಾಗಿ ಕೊಡುತ್ತದೆ. ಆದರೆ ಯಾವುದೂ ಆತನಿಗೆ ಸರಿಯಾಗಿ ತಲಪುವುದಿಲ್ಲ. ಆತನಿಗೆ ಯಾವಾಗಲೂ ಹೀಗೆಯೇ ಬಸ್ಸಲ್ಲಿ , ರೈಲಲ್ಲಿ ದಂಡ ಕಟ್ಟಿಯೇ ಪ್ರಯಾಣಿಸಬೇಕು.... ಸಾಲ ಮಾಡಿಯೇ ಸಾಲ ತೀರಿಸಬೇಕು... ತನಗೆ ನಷ್ಠ ಮಾಡಿಯೇ ಜನರ ಹೊಟ್ಟೆ ತುಂಬಿಸಬೇಕು..... ಆದರೂ ನೇಗಿಲಯೋಗಿಯ ನೋಡಲ್ಲಿ .. . .. . ..!

ಗುರುವಾರ ೩ ಸಪ್ಟೆಂಬರ್ ೨೦೦೯

ಇದು ಪಶ್ಚಿಮದ ಸ್ವರ್ಗ . . . .




ಇಲ್ಲಿ ಬೆಟ್ಟಗಳು ಅಣಕಿಸುತ್ತವೆ , ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ ..? ಜಲಪಾತಗಳು ಹೇಳುತ್ತವೆ ನೀನಿಲ್ಲಿಗೆ ಬರಬಲ್ಲೆಯಾ..? ಮಂಜು ಕೇಳುತ್ತದೆ ನೀ ನನ್ನೊಂದಿಗೆ ಬರಬಲ್ಲೆಯಾ..?.ಹೀಗೆ ಇಲ್ಲಿ ಎಲ್ಲವೂ ಸವಾಲುಗಳೇ..ಪ್ರಶ್ನೆಗಳೇ ಅಂಟಿಕೊಂಡಿವೆ.. ಇಂತಹ ಸವಾಲುಗಳನ್ನು ದಾಟುತ್ತಾ ನಮ್ಮೊಳಗಿನ ಎಲ್ಲಾ ಇಗೋಗಳಿಗೆ ಉತ್ತರ ಹುಡುಕುವ ಈ ದಾರಿ ಯಾವುದಯ್ಯಾ ಅಂತ ಯೋಚಿಸುತ್ತಿದ್ದರೆ, ಅದಕ್ಕೆಲ್ಲಾ ಇಲ್ಲಿದೆ ದಾರಿ. ರೋಚಕತೆಯ ದಾರಿಯಿದು .. ಇದು ಕಾಣುವ ಸ್ವರ್ಗದ ದಾರಿ...

ಅಬ್ಬಾ ಈಗ ವನವಾಸ ಮುಗಿದಿದೆ. ಹಾಗಾಗಿ ನಾವೀಗ ವನದ ನಡುವಿನ ಸೀಳು ಹಾದಿಯಲ್ಲಿ ಗಿರಿಶಿಖರಗಳನ್ನು ಸೀಳಿಕೊಂಡು ಪ್ರವಾಸ ಮಾಡಬಹುದಾಗಿದೆ.ಅಂದರೆ ಮಂಗಳೂರಿನಿಂದ ಬೆಂಗಳೂರಿಗೆ ಹಗಲು ವೇಳೆ ಪ್ರಯಾಣಿಸಬಹುದಾಗಿದೆ.ಇಲ್ಲಿ ಗಗನವೇ ಹತ್ತಿರ ಬಂದಂತೆ . . ದೂರದ ಬೆಟ್ಟದ ತುಂಬೆಲ್ಲಾ ಮಂಜು ಮುತ್ತಿಕ್ಕಿದಂತೆ . . ಹಾಲ್ನೊರೆಯಂತೆ ಧುಮ್ಮುಕಿ ಹರಿಯುವ ಜಲಪಾತ... ಹಚ್ಚ ಹಸಿರಿನ ಸೀರೆಯನ್ನುಟ್ಟ ಆ ಪ್ರಕೃತಿ ಸೊಬಗು . . ಹೌದು ಈ ಸೊಬಗನ್ನು ವರ್ಣನೆ ಮಾಡುತ್ತಾ ಹೋದರೆ ದೂರದ ಅದೆಲ್ಲೋ ಇರುವ ಊಟಿ , ಕೊಡೈಕಾನಲ್‌ನಂತಹ ಪ್ರದೇಶದ ವರ್ಣನೆಯಂತೆ ಭಾಸವಾಗುತ್ತದೆ. ಅಲ್ಲವೇ ಅಲ್ಲ. ನಮ್ಮದೇ ಕರುನಾಡಿನ ಹೆಮ್ಮೆಯ ಪ್ರದೇಶದ ಅದ್ಭುತ ಮೈಮಾಟದ ಸಿರಿಬಾಗಿಲಿನಿಂದ ಎಡಕುಮೇರಿ - ಸಕಲೇಶಪುರದವರೆಗಿನ ಪ್ರದೇಶ. ಈ ಸುಂದರ ಸೊಬಗನ್ನು ನೋಡುವುದಕ್ಕೆ ನಮಗೆ 14 ವರ್ಷ ಬೇಕಾದುವಾ..? ಎನ್ನುವ ಪ್ರಶ್ನೆ ಮನದೊಳಗೆ ಮೂಡಿಯೇ ಮೂಡುತ್ತೆ . ಹೌದು ಈಗ ಹಗಲು ರೈಲು ಓಡಾಟ ಶುರುವಾಗಿದೆ.

ಸುಬ್ರಹ್ಮಣ್ಯದಿಂದ ಸಕಲೇಶಪುರವರೆಗಿನ ಸುಮಾರು 2 ರಿಂದ 3 ಗಂಟೆಯ ಈ ಪ್ರಯಾಣ ಅವಿಸ್ಮರಣೀಯ. ಪ್ರಕೃತಿ ಪ್ರಿಯರ ಸ್ವರ್ಗ.ಅಲ್ಲಿ ಸಾಗುತ್ತಿದ್ದಂತೆಯೇ ಉದ್ಗಾರಗಳು ಕೇಳತೊಡಗುತ್ತದೆ.. ಅದೋ . . ಅಲ್ಲಿ ಗಿರಿ ಶಿಖರಗಳಿಗೆ ಮುತ್ತಿಕ್ಕುವ ಹಿಮರಾಶಿಗಳು , ಸ್ವಲ್ಪ ಆಚೆ ನೋಡಿದರೆ ಗಗನಕ್ಕೆ ಚುಂಬಿಸ ಹೊರಟ ಹಸಿರು ಹಾಸಿದ ಶಿಖರಗಳು .. ಇಲ್ಲಿ ನೋಡಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ.. ಅಗೋ ಕೆಳಗಡೆ ತಿರುಗಿ ... ಭಾರೀ ಪ್ರಪಾತ... ಅಷ್ಟೇ ಅಲ್ಲ ಆಗಾಗ ಕೈಗೆ ಸಿಕ್ಕು ಮಾಯವಾಗಿವ ಬೆಳ್ಳಿ ಮೋಡಗಳು.. ಅಬ್ಬಾ ಅದೇನು ಸುರಂಗದೊಳಗೆ ನುಸುಳಿ ಹೊರಡುವ ಬೋಗಿಗಳು .... ಅಯ್ಯೋ.. ಸಮಯ ಮುಗಿದೇ ಹೋಯಿತು. ಇಲ್ಲ ಸಾಲದು.. ಇನ್ನೂ ಈ ರೈಲು ಇಲ್ಲೇ ಸಾಗಲಿ ಎಂದು ಭಾವಿಸುವಷ್ಟರಲ್ಲೇ ಅದು ಸಕಲೇಶಪುರ ತಲಪಿ ಬಿಡುತ್ತದೆ. ಈ ಅನುಭವನ್ನು ಪ್ರಯಾಣಿಕರು ಹೇಳುವುದು ಹೀಗೆ .

ಹಲವು ವರ್ಷದ ಹೋರಾಟದ ಬಳಿಕ ಮತ್ತೆ ಹಗಲು ರೈಲು ಓಡಾಟ ಕಂಡಿದೆ. ಈಗ ಪ್ರಕೃತಿ ಪ್ರಿಯರಿಗೆ ಸಂತಸದ ಹೊನಲೇ ಹರಿದಿದೆ. ಮಂಗಳೂರಿನ ಅಡಿಕೆ . ಗದ್ದೆಗಳ ಸಂದಿನಿಂದ ಹೊರಡುವ ಈ ರೈಲು ಹಾಗೆಯೇ ಸಾಗುತ್ತಾ ಸುಬ್ರಹ್ಮಣ್ಯ , ಧರ್ಮಸ್ಥಳಕ್ಕೆ ಬಂದ ಭಕ್ತಾದಿಗಳನ್ನು ಹೊತ್ತೊಯ್ಯುತ್ತಾ ಸಾಗಿ ಸಿರಿಬಾಗಿಲು, ಎಡಕುಮೇರಿಯತ್ತ ಸಾಗುವಾಗ ಪ್ರಕೃತಿಯ ರಮಣೀಯತೆ ಗೋಚರಿಸಲು ತೊಡಗುತ್ತದೆ.ಗುಪ್ತಗಾಮಿನಿಯಾಗಿ ಹರಿಯುವ ನದಿಗಳ ಭೋರ್ಗರೆತ , ಕಿವಿಕಡಚಿಕ್ಕುವ ರೈಲು ಹಾರ್ನ್‌ಗೆ ಸಾತ್ ನೀಡುವ ಜೀರುಂಡೆಗಳ ಸದ್ದು , ಹಾಗೆಯೇ ಸುರಂಗದೊಳಗೆ ಪ್ರಯಾಣಿಸುವ ವೇಳೆ ಪ್ರಯಾಣಿಕರ ಸಂತಸದ ಕಿರುಚಾಟ ಹೀಗೆ ನಿಗೂಢವಾಗಿ ಕಾನನವನ್ನು ಸೀಳುತ್ತಾ ಸಾಗುವ ರೈಲಿನ 12 ಬೋಗಿಗಳು ಎಡಕುಮೇರಿ ನಂತರ ಅಲ್ಲಿನ ಕಾಫಿ ತೋಟ , ಗದ್ದೆಗಳ ಸವಿಯನ್ನು ಉಣ ಬಡಿಸುತ್ತಾ ಸಕಲೇಶಪುರ ತಲಪುವ ವೇಳೆ 57 ಸುರಂಗಗಳು , 110 ತಿರುವುಗಳು , ಹಾಗೂ 241 ಸೇತುವೆಗಳನ್ನು ದಾಟಿ ಬಂದಿರುತ್ತದೆ. ಈ ಅನುಭವವನ್ನು ಪ್ರತಿಯೊಬ್ಬ ಕನ್ನಡಿಗನೂ ಅನುಭವಿಸಲೇ ಬೇಕು.





ಹಾಗೆ ನೋಡಿದರೆ ಮಂಗಳೂರಿಗೆ ಮೊದಲು 1907 ರ ಸುಮಾರಿಗೆ 6 ಬೋಗಿಗಳ ಉಗಿಬಂಡಿ ಆರಂಭವಾಗಿತ್ತು. ಮಂಗಳೂರು - ಬೆಂಗಳೂರು ರೈಲನ್ನು ಗಮನಿಸಿದರೆ 1962 ರಲ್ಲಿ ಮೀಟರ್ ಗೇಜ್ ಕಾರ್ಯ ಆರಂಭಗೊಂಡು ,1979 ರಲ್ಲಿ ಮಂಗಳೂರು- ಬೆಂಗಳೂರು ನಡುವೆ ಮೀಟರ್‌ಗೇಜ್ ರೈಲು ಸಂಚಾರ ಆರಂಭವಾಗಿ 1996 ರಿಂದ ಗೇಜ್ ಪರಿವರ್ತನೆಯ ಕಾರಣಕ್ಕಾಗಿ ಬಂದ್ ಆಗಿದ್ದ ರೈಲು ಹಗಲು ರೈಲು ನಂತರ 2003 ರಲ್ಲಿ ಬ್ರಾಡ್ ಗೇಜ್ ಕಾರ್ಯ ಮುಗಿದಿದ್ದರೂ ಬೆಂಗಳೂರಿಗೆ ರೈಲು ಸಂಚಾರ ಆರಂಭವಾಗಿರಲಿಲ್ಲ. ಆದರೆ 2007 ರಲ್ಲಿ ರಾತ್ರಿ ವೇಳೆ ರೈಲು ಆರಂಭಗೊಂಡಿದ್ದರೂ ಹಗಲು ರೈಲಿನ ಬೇಡಿಕೆ ಹಾಗೆಯೇ ಉಳಿದುಕೊಂಡಿತ್ತು. ಈಗ ವನವಾಸ ಮುಗಿದಿದೆ.ಕನಸೂ ಈಡೇರಿದೆ. ಆದರೆ ಸದ್ಯ ವಾರಕ್ಕೆ 3 ದಿನ ಮಾತ್ರಾ. ಅದಲ್ಲ ವಾರದ ಎಲ್ಲಾ ದಿನ ಓಡಾಡ ಬೇಕು, ಕರ್ನಾಟಕದ ಹೆಮ್ಮೆಯ ಈ ಸುಂದರ ಪ್ರಕೃತಿಯ ಸೊಬಗು ಎಲ್ಲರಿಗೂ ಕಾಣಸಿಗಲು ಪ್ರತೀ ದಿನ ಓಡಾಡಬೇಕು ಎಂಬದು ಎಲ್ಲರ ಬೇಡಿಕೆಯಾಗಿದೆ.


ಇಲ್ಲಿನ ರೈಲು ಯಾನವು ಉಳಿದ ಎಲ್ಲಾ ರೈಲು ಯಾನಕ್ಕಿಂತ ಭಿನ್ನ. ಏಕೆಂದರೆ ಪ್ರಕೃತಿಯ ರುದ್ರತೆಯನ್ನು ಪ್ರದರ್ಶಿಸುತ್ತಾ ಸುಮಾರು 1.5 ಕಿ ಮೀ ದೂರದ ಸುರಂಗದ ಒಳಹೊಕ್ಕು ಹೊರಬರುತ್ತದೆ. ಅತ್ಯಂತ ಕಡಿದಾದ ಬಂಡೆಗಳನ್ನು ಸೀಳಿಹೋಗಿರುವ ಇಲ್ಲಿನ ರೈಲು ಹಳಿ ನಿರ್ಮಾಣ ಕಾರ್ಯವೇ ಎಲ್ಲರಿಗೆ ಅಚ್ಚರಿಗೆ ತರುವಂತಾಗುತ್ತದೆ. ಇಂತಹ ಗಿರಿಶಿಖರದ ಮಧ್ಯೆಯೇ ರೈಲು ಓಡಾಡುತ್ತಿದೆ. ಈ ಘಾಟಿ ಪ್ರದೇಶದಲ್ಲಿ ರೈಲು ಸುಮಾರು 15 ರಿಂದ 20 ಕಿಲೋಮೀಟರ್ ವೇಗದಲ್ಲಷ್ಟೇ ಸಾಗುತ್ತದೆ, ಮಾತ್ರರವಲ್ಲ ಅಲ್ಲಿಲ್ಲಿ ನಿಲ್ಲಿಸುತ್ತಾ ಭದ್ರತೆಯನ್ನು ಪರಿಶೀಲಿಸುತ್ತಾ ಸಾಗುತ್ತದೆ. ಹೀಗಾಗಿ ಇಲ್ಲಿನ ರೋಚಕತೆ ಎಲ್ಲರಿಗೂ ಖುಷಿಕೊಡುತ್ತದೆ.


ಒಟ್ಟಿನಲ್ಲಿ ಕವಿ ಅಂದು ಹೇಳಿದ್ದರು ಜೀವನದಲ್ಲಿ ಒಮ್ಮೆಯಾದರೂ ಜೋಗದ ಗುಂಡಿಯನ್ನು ನೋಡಬೇಕು ಎಂದು. ಇದನ್ನೇ ಕೊಂಚ ಬದಲಾಯಿಸಿ ಜೀವನದಲ್ಲಿ ಒಮ್ಮೆಯಾದರೂ ಕನಾಟಕದ ಈ ಸೊಬಗನ್ನು ನೋಡಲೇಬೇಕು. ರೈಲು ಕೂಡಾ ಅದನ್ನೇ ಹೇಳುತ್ತಾ ಸಾಗಿದರೆ ಬೆಟ್ಟಗಳು ನಾನೇರಿದೆತ್ತರಕ್ಕೆ ನೀನೇರಬಲ್ಲೇಯಾ ಎಂದು ಮತ್ತೂ ಅಣಕಿಸುತ್ತಲೇ ಇರುತ್ತವೆ. ಇಂತಹ ಸವಾಲುಗಳಿಗೆ ಉತ್ತರ ಹುಡುಕ ಹೊರಟ ತಂತ್ರಜ್ಞರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಅದಕ್ಕೂ ಮುನ್ನ ನೀವೂ ಒಮ್ಮೆ ಈ ರೈಲ್ಲಿ ಹೋಗಿ ಬನ್ನಿ ಹಸಿರಿನ ಗಿರಿಗಳ ಮಾಲೆಯನ್ನು ತೊಟ್ಟಿರುವ ಪ್ರಕೃತಿಯನ್ನೊಮ್ಮೆ ನೋಡಿ ಬನ್ನಿ.....

ಶನಿವಾರ ೨೯ ಆಗಸ್ಟ್ ೨೦೦೯

ಒಂದು ಘಟನೆಯ ಹಿಂದೆ. . . .

ನಿಜಕ್ಕೂ ಈ ಘಟನೆ ನನ್ನನ್ನು ಒಂದು ಕ್ಷಣ ವಿಚಲಿತನಾಗುವಂತೆ ಮಾಡಿತ್ತು.ಮತ್ತು ಹತ್ತಾರು ಅನುಭವಕ್ಕೆ ಕಾರಣವಾಯಿತು. ಅಷ್ಟಕ್ಕೂ ಈ ಘಟನೆ ಒಂದರ್ಥದಲ್ಲಿ ಕ್ಷುಲ್ಲಕ. ಆದರೆ ಅಲ್ಲಿಯ ವರ್ತನೆ ಮಾತ್ರಾ ಹಾಗೆ ಹೇಳಲು ಸಾಧ್ಯವರಲಿಲ್ಲ. ಯಾಕೆಂದರೆ ಆತ ಒಬ್ಬ ಸೆಕ್ಯುರಿಟಿ ಗಾರ್ಡ್. ಆತನ ಕೆಲಸ ನಿಜಕ್ಕೂ ಸೆಕ್ಯರಿಟಿಯೇ. ಆದರೆ ಎಲ್ಲಿ ಎಚ್ಚರ ವಹಿಸಬೇಕಾಗಿತ್ತೋ ಅಲ್ಲಿ ವಹಿಸಿಲ್ಲ.ಮತ್ತ ಹೇಗೆ ಆತ ನಡೆದುಕೊಳ್ಳಬೇಕಿತ್ತೋ ಹಾಗೆ ಆತ ನಡೆದುಕೊಳ್ಳಲಿಲ್ಲ.

ಇಂದು ನಮ್ಮ ರಾಜ್ಯದ ಅತ್ಯಂತ ಶ್ರೀಮಂತ ಹಾಗೂ ಪ್ರಸಿದ್ದ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷವಾದ ಪೂಜಾ ಕಾರ್ಯಕ್ರಮವಿತ್ತು.ಬಹುಶ: ಇಂತಹ ಕಾರ್ಯಕ್ರಮ ಇತರ ಯಾವ ದೇವಸ್ಥಾನದಲ್ಲೂ ನಡೆಯುವುದಿಲ್ಲ.ಹಾಗಾಗಿ ಈ ಬಗ್ಗೆ ಸಾರ್ವಜನಿಕರ ಮಾಹಿತಿ ಮತ್ತು ಅವರ ಕರೆಯ ಮೇರೆಗೆ ಆಸಕ್ತಿಯಿಂದ ವಿಶೇಷವಾದ ವರದಿಯನ್ನು ತಯಾರಿಸುದಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಳಗ್ಗೆ 7.30 ರ ಸುಮಾರಿಗೆ ಹೋಗಿದ್ದೆ ಅವಾಗಿನಿಂದಲೇ ದೇವಸ್ಥಾನದ ಹೊರ ಆವರಣದಲ್ಲಿ ಅಗತ್ಯ ಚಿತ್ರಗಳ್ನು ದಾಖಲಿಸುತ್ತಲಿದ್ದೆ.ಹಾಗೇ ಸುಮಾರು 9.30 - 10 ರ ಸುಮಾರಿಗೆ ಅಲ್ಲೇ ಹೊರ ಆವರಣಕ್ಕೆ ಬಂದಂತಹ ಒಬ್ಬ ಸೆಕ್ಯುರಿಟಿ ಗಾರ್ಡ್ ಪ್ರಶ್ನಿಸಿದ್ದೇ ಹೀಗೆ ... ನೀವ್ಯಾರು...? ನೀವ್ಯಾಕೆ ... ಫೋಟೋ ತೆಗೀತೀರಿ...?? ನಿಮ್ಗೆ ಪರ್ಮಿಶನ್ ಕೊಟ್ಟೋರ್‍ಯಾರು...?? ಹಾಗೆಲ್ಲ ಇಲ್ಲಿ ಆಗಲ್ಲ... ಎಂದು ಹೇಳುತ್ತಾ ದರ್ಪದಿಂದ ಬಂದ ... ನಾನು ಎಲ್ಲದಕ್ಕೂ ಒಂದೇ ಉತ್ತರ ಕೊಟ್ಟೆ ನಾನು ಪರ್ಮೀಶನ್ ತೆಗೆದೇ ಚಿತ್ರೀಕರಣ ಮಾಡುತ್ತಿದ್ದೇನೆ... ಅಷ್ಟಕ್ಕೂ 15 ವರ್ಷಗಳಿಂದ ಕುಕ್ಕೆಗೆ ಆಗಮಿಸುತ್ತಿದ್ದೇನೆ.. ದೇವಳದ ಹೊರಾಂಗಣದಲ್ಲಿ ಯಾರು ಬೇಕಾದ್ರೂ ಫೋಟೋ ತೆಗೀ ಬಹುದಲ್ಲಾ ಎಂದು ಹೇಳಿದೆ ಮಾತ್ರವಲ್ಲ ಇಲ್ಲೂ ತೆಗೀಬಾರ್‍ದು ಅಂತಾದ್ರೆ ಇಲ್ಲೊಂದು ಬೋರ್ಡ್ ಹಾಕ್ಬೇಕು ಎಂದೆ... ಆತ ಅಷ್ಟರಲ್ಲಿ ನನ್ನ ಕ್ಯಾಮಾರಾ ಕಸಿದುಕೊಂಡ... ನಂತರ ನಾನು ಮಾಧ್ಯಮದ ಪ್ರತಿನಿಧಿ ಅಂತ ಆತನಿಗೂ ತಿಳೀತು ಕ್ಯಾಮಾರ ಕೊಟ್ಟ.... ಆ ಬಳಿಕ ನಾನು ಆತ ಕ್ಯಾಮಾರ ಕಸಿದುಕೊಂಡ ಬಗ್ಗೆ ಏನು ಮಾಡಬೇಕೋ ಅದನ್ನು ಮಾಡಿದೆ.

ನೋಡಿ ಆತ ಕೆಲಸ ಮಾಡುವುದು ದೇವಸ್ಥಾನದಲ್ಲಿ ಆತನೇ ಪೊಲೀಸರ ಮುಂದೆ ಒದರಿದ್ದು ಸುಳ್ಳುಗಳ ಕಂತೆ.... ಆತನ ವಿರುದ್ದ ನಾನೇ ರ್‍ಯಾಶ್ ಆದೆನಂತೆ... ಆತನ ಮೈಮೇಲೆ ಕೈಮಾಡಿದೆನಂತೆ... ನಾನು ದೇವಳದ ಒಳಾಂಗಣಕ್ಕೆ ನುಗ್ಗಲು ಯತ್ನಿಸಿದೆನಂತೆ..... ಕಳೆದ ಒಂದೂವರೆ ವರ್ಷಗಳಿಂದ ಅಲ್ಲಿ ಕೆಲಸ ಮಾಡುವ ಆತನಿಗೆ ನನ್ನ ಪರಿಚಯವೇ ಇಲ್ಲವಂತೆ... ಹೀಗೆ ಹೇಳುತ ಸಾಗಿದ... ಆದರೆ ನನ್ನ ಆತ್ಮಸಾಕ್ಷಿ ಹೇಳಿದ್ದೇನೆಂದರೆ ಇಂದು ಸತ್ಯಕ್ಕೆ ಬೆಲೆ ಇಲ್ಲದ ... ನಮ್ಮ ಮೌನಕ್ಕೆ ಬೆಲೆ ಇಲ್ಲದ ಇದನ್ನೇ ದೌರ್ಬಲ್ಯ ಎಂದು ತಿಳಿಯುವ ಈ ಸಮಾಜದಲ್ಲಿ ಇದನ್ನೆಲ್ಲಾ ಸಮರ್ಥಿಸ ಹೊರಟರೆ ಹೇಗೆ..? ನಮ್ಮ ಆಯಸ್ಸಿನ ಬಹುಪಾಲು ಇಲ್ಲೇ ಕಳೆದುಹೋಗಬಹುದು. ಅದೂ ಯಾವನೋ ಒಬ್ಬ ದೇವರ ಹಣವನ್ನು ರಕ್ಷಣೆಯ ಹೆಸರಿನಲ್ಲಿ ಹೊಟ್ಟೆಯುರೆಯಲು ಉಪಯೋಗಿಸಿಕೊಳ್ಳುತ್ತಿರುವವನ ಜೊತೆ ಕಾಲಹರಣ ಮಾಡಿದರೆ ಹೇಗೆ ಆಂತ ಅನಿಸಿತು. ಇಂತಹ ಕ್ಷೇತ್ರಕ್ಕೆ ಹೆಚ್ಚು ಪ್ರಚಾರವನ್ನು ನೀಡಿ ಇನ್ನಷ್ಟು ಜನ ಇಲ್ಲಿಗೆ ಬರುವಂತಾಗಿ ಹೊಟ್ಟೆ ಹೊರೆಯುವ ಮಂದಿ ಅಮಾಯಕ ಭಕ್ತರನು ವಂಚಿಸಿ ಅವರಿಗೂ ದರ್ಪ ತೋರಿ ತಮ್ಮ ಪೌರುಷವನ್ನು ತೋರುವಂತೆ ಮಾಡುತ್ತೇವಲ್ಲಾ ನಿಜಕ್ಕೂ ನಾವು ಮೂರ್ಖರು ಅಂತ ನನಗೆ ಅನ್ನಿಸಿದ್ದು ಸತ್ಯ. ದೇವರ ಮುಂದೆ ನಾವೆಲ್ಲಾ ಸಣ್ಣವರು ಅಂತ ಹಿರಿಯರು ಹೇಳಿದ್ದನು ನಾವು ಕೇಳಿದರೆ ಇವರಿಗೆಲ್ಲಾ ದೇವರಿಗಿಂತ ನಾವೇ ದೊಡ್ಡವರು ಎಂಬುದನ್ನು ಕಲಿಯಬೇಕಾಗಿದೆ. ಹಾಗಾಗಿ ದೇವರು ಸರ್ವಾಂತರ್ಯಾಮಿ ಅಂತಲೂ ನಮಗೆ ಹಿರಿಯರು ಹೇಳಿದ್ದಾರಲ್ಲಾ ನಿಜಕ್ಕೂ ಇಂದು ಇದುವೇ ಸತ್ಯ.ಇಂದಿಗೆ ಇದುವೇ ಉತ್ತಮ.

ಕುಕ್ಕೆಯಲ್ಲಿ ನಿಜ್ಕಕೂ ಸೆಕ್ಯರಿಟಿ ಗಾರ್ಡ್‌ಗಳು ಬೇಕಾ ಬೇಡವಾ ಅಂತ ಯೋಚಿಸುವುದು ಇಂದಿನ ಅನಿವಾರ್ಯತೆ. ನಿಜಕ್ಕೂ ಅಲ್ಲಿ ಆ ಬಗ್ಗೆ ಜನ ಮಾತನಾಡುತ್ತಿದ್ದರು, ಅಲ್ಲಿ ಅಮಾಯಕ ಭಕ್ತರನ್ನು ಗದರಿಸುವುದಕ್ಕೆ ಮಾತ್ರಾ ಈ ಸೆಕ್ಯರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿದಂತಾಗಿದೆ... ಭದ್ರತೆ ಹೆಸರಿಗೆ ಮಾತ್ರಾ ಎಂಬ ಮಾತು ಇಲ್ಲಿ ಕೇಳುತ್ತಿತ್ತು...

ಅದಿರಲಿ ದೇವಸ್ಥಾನಗಳೆಲ್ಲವೂ ಹೀಗೆಯಾ...?? ಅಲ್ಲಿ ದೇವರ ಹೆಸರಿನಲ್ಲಿ ದೇವರಾಗುವವರೇ ಹೆಚ್ಚಾ ಅಲ್ಲ ಭೂತಗಳಾಗುವವರು ಹೆಚ್ಚಾ ಎಂಬುದೇ ಒಂದು ಪ್ರಶ್ನೆ..??. ನಿಜಕ್ಕೂ ದೇವರಿದ್ದರೆ ಇದೆಲ್ಲಾ ಆತನಿಗೆ ಏಕೆ ಗೊತ್ತಾಗುತ್ತಿಲ್ಲ. ..?

ರವಿವಾರ ೨೩ ಆಗಸ್ಟ್ ೨೦೦೯

ಗುಹೆಯೊಳಗೆ ಜಲಪಾತ .......




ಪ್ರಕೃತಿಯೊಳಗಿನ ವೈಚಿತ್ರ್ಯವನ್ನು ಬಲ್ಲವರು ಯಾರೂ ಇಲ್ಲ. ಅದರೊಳಗೆ ಏನೆಲ್ಲಾ ಹುದುಗಿರಬಹುದು ಎಂಬುದು ಕಲ್ಪನೆಗೂ ನಿಲುಕುವುದಿಲ್ಲ. ಅಂತಹ ವೈಚಿತ್ರ್ಯವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಅನಂತಾಡಿಯಲ್ಲಿದೆ . ಇಲ್ಲಿನ ಗುಹೆಯೊಳಗೆ ಜಲಪಾತವೊಂದಿದೆ. ಇದನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಈ ಗುಹೆಯೊಳಗೆ ಭಕ್ತರು ತೀರ್ಥ ಸ್ನಾನ ಮಾಡಿ ಪಾವನರಾಗುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿ ಅನಂತಾಡಿಯ ಸನಿಹದಲ್ಲಿ ಸುಳ್ಳಮಲೆ ಎಂಬ ಪ್ರದೇಶವಿದೆ. ದಟ್ಟ ಕಾನನದ ನಡುವೆ ಇರುವ ಈ ಪ್ರದೇಶವು ಈಗ ಜನರ ಆಕರ್ಷಣೆಯ ಮತ್ತು ಪೂಜ್ಯ ಭಾವನೆಯ ಪ್ರದೇಶವಾಗಿದೆ. ಇಲ್ಲಿರುವ ಗುಹೆಯೇ ಈ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ. ಮನುಷ್ಯ ಯಾವಾಗಲೂ ನಂಬಿಕೆ, ವಿಶ್ವಾಸದ ಮೇಲೆಯೇ ಬದುಕುತ್ತಾನೆ.ಹಾಗಾಗಿ ಅಲ್ಲಿ ಪರಿಶುದ್ದತೆ ಇರುತ್ತದೆ.ಕೆಲವೊಮ್ಮೆ ಆ ನಂಬಿಕೆಗಳು ಹುಸಿಯಾಗುವುದೂ ಇದೆ. ಆದರೆ ಇಲ್ಲಿ ಹಾಗಾಗುವುದಿಲ್ಲ. ಅಂತಹ ನಂಬಿಕೆಗಳು ಇಲ್ಲಿ ದೊಡ್ಡದಾಗಿ ಬೆಳೆಯುತ್ತದೆ ಮತ್ತು ಬೆಳೆದಿದೆ. ಅದು ಇಲ್ಲಿ ಗುಹೆಯ ರೂಪದಲ್ಲಿ ಕಾಣಿಸುತ್ತದೆ. ಸುಳ್ಳ ಮಲೆಯ ಈ ಪ್ರದೇಶದಲ್ಲಿರುವ ಗುಹೆಯ ಒಳಗಡೆ ಕಿರು ಜಲಪಾತವೊಂದು ಧಮುಕುತ್ತದೆ. ಈ ಜಲಪಾತದಲ್ಲಿ ಸ್ನಾನ ಮಾಡಿದರೆ ಎಲ್ಲಾ ವ್ಯಾಧಿಗಳು ನಿವಾರಣೆಯಾಗಿ ಪಾವನವಾಗುತ್ತದೆ ಎಂಬ ನಂಬಿಕೆ ಇದೆ. ವರ್ಷದಲ್ಲಿ ಕೇವಲ 4 ದಿನ ಮಾತ್ರಾ ಇಲ್ಲಿ ತೀರ್ಥ ಸ್ನಾನ ಮಾಡಬಹುದಾಗಿದೆ. ಉಳಿದ ಸಮಯದಲ್ಲಿ ಇಲ್ಲಿಗೆ ಪ್ರವೇಶವಿರುವುದಿಲ್ಲ. ಶ್ರಾವಣ ಮಾಸದ ಅಮವಾಸ್ಯೆಯಿಂದ ಆರಂಭಗೊಂಡು ಗಣೇಶ ಚೌತಿಯವರೆಗೆ ಇಲ್ಲಿ ಗುಹೆಯೊಳಗಡೆ ಪ್ರವೇಶವಿರುತ್ತದೆ. ದಕ್ಷಿಣ ಭಾರತದ ಏಕೈಕ ಮತ್ತು ಅತ್ಯಂತ ಹೆಸರುವಾಸಿಯಾದ ಈ ಪ್ರದೇಶದಲ್ಲಿ ಕಾರಣಿಕ ಪುರುಷರು ವಾಸಿಸುತ್ತಿದ್ದರು ಎಂದು ನಂಬಲಾಗಿದೆ.ಅನೇಕ ಪವಾಡಗಳು ಇಲ್ಲಿ ನಡೆದಿದೆ ಎಂದೂ ಹೇಳಲಾಗುತ್ತದೆ. ಶ್ರಾವಣ ಮಾಸದ ಅಮವಾಸ್ಯೆಯಂದು ಇಲ್ಲಿ ಸ್ಥಳಿಯ ಮನೆತನದವರು ಬಂದು ಪೂಜೆ ಮಾಡುತ್ತಾರೆ. ಮಾತ್ರವಲ್ಲ ಅಂದು ಇನ್ನೊಂದು ಮನೆತನದವರು 16 ಗಂಟಿನ ಬಿದಿರಿನ ಏಣಿಯನ್ನೂ ಕೂಡಾ ತಯಾರಿಸುತ್ತಾರೆ. ಇದರ ಮೂಲಕ ಗುಹೆಯೊಳಗಡೆ ಇಳಿಬೇಕಾಗುತ್ತದೆ.ಈ ಗುಹೆಯೊಳಗಡೆ “ಗೋವಿಂದಾ...” ಎನ್ನುವ ಘೋಷಣೆಯೊಂದಿಗೆ ಇಳಿಯುತ್ತಾರೆ.

ಈ ಗುಹೆಯೊಳಗಡೆ ತೀರಾ ಕತ್ತಲು ಆವರಿಸಿರುತ್ತದೆ. ಕೃತಕವಾಗಿ ವ್ಯವಸ್ಥೆ ಮಾಡಿಕೊಂಡ ಬೆಳಕೇ ದಾರಿ ದೀಪವಾಗುತ್ತದೆ. ಗುಹೆಯುದ್ದಕ್ಕೂ ನೀರಿನ ಹನಿಗಳು ಮುತ್ತಿಕ್ಕುವ ಇಲ್ಲಿ ಬೆನ್ನು ಬಗ್ಗಿಸಿಕೊಂಡೇ ಸಾಗಬೇಕು. ಅರ್ಧ ದಾರಿಯಲ್ಲಿ 16 ಗಂಟಿನ ಬಿದಿರಿನ ಏಣಿ ಸಿಗುತ್ತದೆ ಅದರಲ್ಲಿ ಇಳಿದು ಕೆಳಗಡೆ ಇಳಿದ ಬಳಿಕ ಅತ್ಯಂತ ಕಿರು ದಾರಿಯಲ್ಲಿ ಅಂದರೆ ಒಬ್ಬ ಮಾತ್ರಾ ಹೋಗಬಹುದಾದ ಹಾದಿಯಲ್ಲಿ ಒಳಸಾಗಿದಾಗ ಅಲ್ಲಿ ಜಲಪಾತ ಬೀಳುತ್ತಿರುತ್ತದೆ. ಅದರೊಳಗಡೆ ಸ್ನಾನ ಮಾಡಿದಾಗ ಪಾವನರಾಗುತ್ತಾರೆ ಎಂಬ ನಂಬಿಕೆ ಭಕ್ತರದ್ದು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿದೆಡೆ ತೀರ್ಥ ಸ್ನಾನದ ಕ್ಷೇತ್ರಗಳಿವೆ. ಆದರೆ ಈ ಪ್ರದೇಶವು ಅದೆಲ್ಲಕ್ಕ್ಕಿಂತ ಭಿನ್ನವಾಗಿದೆ ಪ್ರಕೃತಿಯ ನಡುವೆ ಇರುವ ಈ ಪ್ರದೇಶಕ್ಕೆ ದುರ್ಗಮವಾದ ಹಾದಿಯಿದೆ. ಅದೆಲ್ಲವನ್ನೂ ಕ್ರಮಿಸಿ ಮುಂದೆ ಸಾಗಿದಾಗ ಗುಹೆಯಿರುವ ಪ್ರದೇಶ ಸಿಗುತದೆ. ಇಲ್ಲಿಗೆ ಮಹಿಳೆಯರು - ಪುರುಷರೆನ್ನದೆ ಅನೇಕರು ಈ ೪ ದಿನಗಳ ಕಾಲ ಆಗಮಿಸಿ ಗುಹೆಯೊಳಗಡೆ ಸಾಗಿ ಸ್ನಾನವನ್ನು ಮಾಡುತ್ತಾರೆ. ಈ ತೀರ್ಥವು ಉತ್ತರದ ಕಾಶಿಯಿಂದ ಇಳಿದು ಬರುತ್ತದೆ ಎನ್ನುವ ನಂಬಿಕೆ ಕೂಡಾ ಇದೆ.ಗುಹೆಯ ಬಳಿಯಿರುವ ಬಿಳಿ ಬಣ್ಣದ ಹೂವುಗಳು ಕೂಡಾ ಆಕರ್ಷಕವಾಗಿ ಕಾಣುತ್ತದೆ.ಈ ಪ್ರದೇಶವು ಗುಡ್ಡ ಪ್ರದೆಶದಲ್ಲಿದೆ. ಆದರೆ ಇಲ್ಲಿ ಗುಹೆಯೊಳಗೆ ಇರುವ ಜಲಪಾತ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇಲ್ಲಿನ ಜಲಪಾತದ ನೀರು ಈ ಪ್ರದೆಶದಲ್ಲಿ ಎಲ್ಲೂ ಹರಿಯದೆ ಸುಮಾರು 3ಕಿಲೋ ಮೀಟರ್ ದೂರದಲ್ಲಿ ಮೇಲೇಳುತ್ತದೆ. ಈ ನಡುವೆ ಇಲ್ಲಿ ತೀರ್ಥ ಸ್ನಾನ ಮಾಡುವ ಭಕ್ತರು ಗೋವಿಂದಾ.. ಎನ್ನುವ ಘೋಷಣೆ ಜೋರಾಗಿ ಹಾಕಿದರೆ ನೀರು ಕೂಡಾ ಹೆಚ್ಚಾಗಿ ಬರುತ್ತದೆ ಎನ್ನುತ್ತಾರೆ ಮಾತ್ರವಲ್ಲ ಇಲ್ಲಿ ಸ್ನಾನದ ವೇಳೆ ಭಕ್ತರು ಬಿಡುವ ವೀಳ್ಯದೆಲೆ ಹಾಗೂ ಅಡಕೆಯನ್ನು ಜಲಪಾತದ ಬಳಿ ಬಿಟ್ಟು ಬರುತ್ತಾರೆ. ಈ ವಸ್ತುಗಳೂ ಸುಮಾರು 3 ಕಿಲೋ ಮೀಟರ್ ದೂರದಲ್ಲಿ ನೀರಿನಿಂದ ಮೇಲೆ ಬರುತ್ತದೆ ಎಂದು ಹೇಳುತ್ತಾರೆ ಸ್ಥಳೀಯರು. ಹೀಗೆ ತೀರ್ಥ ಸ್ನಾನ ಮಾಡಿದ ಬಳಿಕ ಇಲ್ಲಿರುವ ದೇವರ ಕಲ್ಲುಗಳಿಗೆ ಪೂಜೆಯನ್ನು , ಪ್ರಾರ್ಥನೆಯನ್ನು ಮಾಡುತ್ತಾರೆ.

ಮೊನ್ನೆ ನಾವು ಕೂಡಾ ಈ ಪ್ರದೇಶಕ್ಕೆ ಹೋಗಿದ್ದೆವು. ಅತ್ಯಂತ ಉತ್ಸಾಹದಲ್ಲಿ ಹೋಗಿದ್ದೆವು.ಅಲ್ಲಿ ತಲಪಿದ ಬಳಿಕ ಒಂದಷ್ಟು ಜನರ ತಂಡ ಆ ಗುಹೆಯೊಳಗಡೆ ಹೋಗಿ ಬಂದರ. ನಂತರ ನಮ್ಮನ್ನೂ ಅಲ್ಲಿಯ ಜನ ಒಳಹೋಗಲು ಒತ್ತಾಯಿಸಿದರ.ಹಾಗೆ ನಾವು ಸ್ವಲ್ಪ ಆತಂಕದ ನಡುವೆಯೇ... ಮುಂದಡಿ ಇಟ್ಟೆವು... ಮುಂದೆ ಸಾಗಿ... ಏಣಿ ಇಳಿದು ಕೊಂಚ ಸಾಗಿದಾಗ ಕಡಿದಾದ ದಾರಿ... ಅಲ್ಲೂ ಸಾಗಿ ಒಳಹೋಗಾದ ಜಲಪಾತ ಕಂಡಿತು... ಅದರೊಳಗೆ ಆಮ್ಲಜನಕದ ಕೊರತೆ ಆಗ ಕಾಣುತ್ತಿತ್ತು... ಆದರೂ ನಮ್ಮೊಂದಿಗೆ ಇದ್ದವರು ಮಾತ್ರಾ ಬಿಡಲಿಲ್ಲ.. ನಾವೂ ತೀರ್ಥ ಸ್ನಾನ ಮಾಡುವಂತೆ ಮಾಡಿದರು... ಹಾಗೆ ಆಮ್ಲಜನಕದ ಕೊರತೆಯ ಪರಿಣಾಮ ..ನಮ್ಮನ್ನೂ ಗೋವಿಂದಾ...ಗೋವಿಂದಾ ಎನ್ನುವಂತೆ ಮಾಡಿತು... ಬೇಗ ಬೇಗ ಗೋವಿಂದ ಹಾಕಿ ಹೊರಬಂದಾಗ ಅಬ್ಬಾ..ಗೋವಿಂದಾ ಎಂದೆನಿಸಿತು... ಅದುವರೆಗೆ ನೆನಪಾಗದ ಗೋವಿಂದರುಗಳೆಲ್ಲಾ ಆಗ ನೆನಪಾದ್ದು ನಂತರ ನಮಗೆ ನಾವೇ ಹೇಳಿಕೊಂಡು ನಗುವಂತೆ ಮಾಡಿತು. ಆದರೆ ಆ ಕಾರ್ಯಕ್ರಮ ಮಾತ್ರಾ ಖುಷಿ ನೀಡಿತ್ತು. ಹೊಸತೊಂದು ಅನುಭವ ನೀಡಿತ್ತು. ಪ್ರಕೃತಿಯ ಅಚ್ಚರಿಯನ್ನು ಕಾಣುವಂತೆ ಮಾಡಿತ್ತು,......


ಇಲ್ಲಿ ಕಾಲೆಳೆಯುವುದೇ ಸರಿಯಂತೆ...!!



ಮೊನ್ನೆ ಹಾಗೇ ಸುಮ್ಮನೆ ಯೋಚಿಸುತ್ತಿದೆ. ನಿನ್ನೆಯವರೆಗೆ ಅದಾವ ರೀತಿಯಲ್ಲಿ ಮಾತನಾಡುತ್ತಿದ್ದವ ಇಂದು ಬದಲಾಗಿದ್ದಾನೆ. ಆತ ಅದೇನೋ "ದೊಡ್ಡ " ಹುದ್ದೆಯಲಿದ್ದ. ಆದರೆ ನಾನು ಅಷ್ಟರ ಮಟ್ಟಿಗೆ ಇರಲಿಲ್ಲ ಎಂಬುದೂ ನನಗೆ ತಿಳಿದಿತ್ತು. ಒಂದಂತೂ ಸತ್ಯವಾಗಿತ್ತು. ನನ್ನ ಹುದ್ದೆ "ದೊಡ್ಡ"ದಲ್ಲದಿದ್ದರೂ ವ್ಯಾಪ್ತಿ ದೊಡ್ಡದಾಗಿತ್ತು ಹೀಗಾಗಿ ಅನೇಕ ಕೆಲಸಗಳು ಕೆಲವೊಮ್ಮೆ ಸಲೀಸಾಗಿ ಬಿಡುತ್ತಿತ್ತು. ಈ ಕಾರಣಕ್ಕಾಗಿ ಅನೇಕರು ನನ್ನ ಸಹಾಯ ಪಡೆಯುತ್ತಿದ್ದರು. ಅಲ್ಲೂ ಹಾಗೆತೇ ಆಯಿತು. ಆತ ದಿನಂಪ್ರತಿ ನನಗೆ ಫೋನಾಯಿಸುತ್ತಿದ್ದ . ಅದೇನಾಯಿತು.. ಅದು ಹೀಗೆ.. ಇದು ಹೀಗೆ ಅಂತ ವಿವಿದ ಲೋಕಾಭಿರಾಮ ಬಿಡುತ್ತಲಿದ್ದ. ಹಾಗೇ ಆತನ ಕೆಲಸವೂ ಮುಗಿಯಿತು. ಕೆಲ ಸಮಯದ ಬಳಿಕ ನನಗೂ ಆತನಿರುವಲ್ಲಿ ಕೆಲವೊಂದು ಆಗಬೇಕಿತ್ತು. ಆತ ಫೋನೇ ತೇಗೀಲಿಲ್ಲ. ಒಂದಷ್ಟು ಸಮಯದ ಬಳಿಕ ಆತ ಫೋನು ಮಾಡಿವನೇ ಹೇಳಿದ ನಾನು ಸ್ವಲ್ಪ ಬ್ಯುಸಿ...!!. ಕೆಲಸದ ಬಗ್ಗೆ ಹೇಳಿದಾಗ ಇಲ್ಲ ನನಗೆ ಅವರನ್ನು ಪರಿಚಯವೇ ಇಲ್ಲ. ಅಂದ...!! ಅದು ಬಿಡಿ ಕೆಲಸ ಆಗುತ್ತಾ ಎಂದಾಗ ಇಲ್ಲ ಆಗಲ್ಲ ಎಂದು ಹೇಳಿಯೇ ಬಿಟ್ಟ.....!! ಇಲ್ಲೂ ಒಂದು ವಿಷಯ ಇತ್ತು. ಏನೆಂದರೆ ಆತ ಅನೇಕ ಬಾರಿ ಇಲ್ಲಿ ಆತನ ಕೆಲಸಕ್ಕಾಗಿ ಓಡಾಡಿದ್ದ. ಆದರೆ ಕೆಲಸ ಆಗಿರಲಿಲ್ಲ. ಆದರೆ ನಾನು ಮಾತನಾಡಿದ ಆ ಕೆಲಸ ತಕ್ಷಣವೇ ಆಗಿತ್ತು. ಹಾಗಾಗಿ ಆತನಲ್ಲಿ ಒಳಗಿನ ಮತ್ಸರ ಹೆಚ್ಚುತ್ತಿತ್ತು ಎಂದು ಆತನ ಮಾತುಗಳೇ ಹೇಳುತ್ತಿತ್ತು. ಅದರ ಪ್ರತೀಕಾರ ನನಗೆ ಸಿಕ್ಕಿದ್ದು ಇಲ್ಲಿ.ಸರಿ ಯಾಕೆಂದರೆ ನಾವು ಯಾವ ಕೆಲಸವನ್ನೂ ಸ್ವಾರ್ಥದ ದೃಷ್ಠಿಯಿಂದ ಮಾಡಬಾರದು ಮತ್ತು ಪ್ರತಿಫಲಾಪೇಕ್ಷೆಯಿಲ್ಲದೇ ಮಾಡಬೇಕು ಎಂಬ ಮಾತನ್ನು ನಂಬಿದವರು. ಮತ್ತು ಆ ವಾಕ್ಯವನ್ನು ಆವಾಗ‌ಆವಾಗ ನೆನಪಿಸಿಕೊಳ್ಳುತ್ತಲೇ ಇರುವವರು. ಮತ್ತು ಓದುತ್ತಲೂ ಇರುವವರು. ಹಾಗಾಗಿ ತಲೆಕೆಡಿಸಿಕೊಂಡಿಲ್ಲ. ಮತ್ತು ಬೇರೆ ದಾರಿ ಹಿಡಿಯುವುದು ಅನಿವಾರ್ಯವೂ ಆಗಿತ್ತು. ಕೆಲಸವೂ ಆಗಿತ್ತು. ಅದಲ್ಲ ನಾನು ಯೋಚಿಸುತ್ತ ಸಾಗಿದ್ದು ಮತ್ತು ಈ ಸಮಾಜದ ಅನೇಕ ಸಂಗತಿಗಳನ್ನು ನೋಡಿದಾಗ ಮತ್ತು ಪುಸ್ತಕ ಓದಿದಾಗ ತಿಳಿಯುವುದು ಏನೆಂದರೆ ಏಕೆ ಮನುಷ್ಯ ಹೀಗೆ.. ಮತ್ಸರದಲ್ಲೇ ಮತ್ತು ಕಾಲೆಳೆಯುವದರಲ್ಲೇ ಕಾಲ ಕಳೆಯುವುದೇತಕ್ಕೆ...???

ಇದು ನನ್ನ ಒಬ್ಬನ ಮಾತಲ್ಲ.ಇತ್ತೀಚೆಗೆ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಮಿತ್ರರೊಬ್ಬರು ಈ ಮಾತನ್ನು ಉಲ್ಲೇಖಿಸಿದ್ದರು. ಮನುಷ್ಯನ ಗುಣ ಹುಟ್ಟಿನಿಂದಲೇ ಬರುತ್ತದೆ. ಮೊನ್ನೆ ಬಬ್ರು ಹೇಳುತ್ತಲಿದ್ದರು. ಮಗು ಬೆಳೆಯುತ್ತಾ ಅದಕ್ಕೆ ಜೇಬು ಇರುವ ಅಂಗಿ ಹಾಕುತ್ತಲೇ ಅದಕ್ಕೆ ಮತ್ಸರಗಳು ಆರಂಭಗೊಳ್ಳುತ್ತದೆ. ಆ ಜೇಬಿನಲ್ಲಿ ಏನೆಲ್ಲ ಆ ಹಾಕಿಕೊಳ್ಳಬಹುದು ಮತ್ತು ಇನ್ನೊಂದು ಮಗು ಏನನ್ನೆಲ್ಲಾ ಹಾಕಿಕೊಳ್ಳುತ್ತದೆ ಎನ್ನುವುದನ್ನು ಅದು ನೋಡುತ್ತಲೇ ಇರುತ್ತದೆ. ಮತ್ತು ಅದಕ್ಕಿಂತ ಹೆಚ್ಚಿನದನು ಆ ಜೇಬಲ್ಲಿ ಹಾಕಿಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ. ಹಾಗಾಗಿ ಆ ಜೇಬಿನ ಬದಲಾವಣೆಗೆ ಸಾಧ್ಯವಿಲ್ಲ. ಏಕೆಂದರೆ ಜೂಬು ಬೇಕಲ್ಲ... ಅದು ತಿಳಿದಿದ್ದರೂ ಇಲ್ಲಿ ದಾಖಲಿಸುವುದು ನನ್ನ ಸಮಾಧಾನಕ್ಕಾಗಿ ಮಾತ್ರವೇ..

ನಾವು ಮಾಡುವ ಎಲ್ಲಾ ಹೆಲ್ಪ್‌ಗಳು ಮತ್ತೆ ಸಿಗುತ್ತವೆ ಎಂದಲ್ಲ. ಅದು ಮಿತ್ರತ್ವದ ಕಾರಣಕ್ಕಾಗಿ ಮತ್ತು ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ. ಆದರೆ ಇಂದು ಅದೇನೋ ದೊಡ್ಡ ಹುದ್ದೆ ಸಿಕ್ಕ ತಕ್ಷಣ ತನಗೆ ಎಲ್ಲವೂ ಆಯಿತು ಎನ್ನುವ ಹುಂಬತನಕ್ಕೆ ಯಾರು ಏನೂ ಹೇಳಲಾಗದು. ಮತ್ತು ಅಂತಹವರು ಕೇವಲ ಸ್ವಂತ ಲಾಭಕ್ಕಾಗಿ ನಮ್ಮನ್ನು ದುಡಿಸಿಕೊಳ್ಳುತ್ತಾರೆಯೇ ಹೊರತು ಸಂಬಂಧಗಳು ಅವರಿಗೆ ಬೇಕಾಗಿಲ್ಲ. ನಾವಾದರೂ ನಮ್ಮ ಕೆಲಸ ಬಿಟ್ಟು ಆ ಮಿತ್ರತ್ವಕ್ಕಾಗಿ ಸಂಬಂದಕ್ಕಾಗಿ ಏನಾದರೂ ಮಾಡಿ ಬಿಡುತ್ತವೆ. ಆದರೆ ಅದರ ನೆನಪಾದರೂ ಇರಬೇಕಿತ್ತು ಅಂತ ನಾವು ಯೋಚಿಸುತ್ತೇವೆ. ಹಾಗೆಂದು ಆತ ನಮ್ಮ ಗುಲಾಮನಾಗಿರ ಬೇಕು ಎಂಬುದೂ ಅಲ್ಲ.

ಅದಕ್ಕಿಂಲೂ ಇನ್ನೊಂದು ನೋವಿನ ಸಂಗತಿ ಎಂದರೆ ನಮ್ಮಿಂದ ಪ್ರಯೋಜನ ಪಡೆದ ಮಂದಿಯೇ ಮತ್ತೆ ನಮ್ಮನ್ನು ಅಪಹಾಸ್ಯ ಮಾಡುವುದು.. ನಮ್ಮ ಬಗ್ಗೆ ಇನ್ನಿಲ್ಲದ ಪ್ರಚಾರ ಹಬ್ಬಿಸಿಬಿಡುವುದು ಮತ್ತು ಹಾಸ್ಯ ವಸ್ತುವಾಗಿ ಕಾಣುವುದು. ನಿಜಕ್ಕೂ ಇಂತಹವರ್‍ನ ಕಂಡಾಗ ಮೈಯಿಡೀ ಉರಿಯುತ್ತದೆ. ಇನ್ನೂ ಕೆಲವರು ಬೇರೊಬ್ಬರ ಮೂಲಕ ನಮ್ಮ ದಾರಿಗೆ ಅಡ್ಡಗಾಲು ಹಾಕುವುದು.. ಇನ್ನೊಂದರ್ಥದಲ್ಲಿ ಕಾಲೆಳೆಯುವುದು...!!
ಬೇಕಿತ್ತಾ ಮನಗೆ ವಿಷ ಸರ್ಪಗಳೆಗೆ ಹಾಲೆರೆಯುವ ಕೆಲಸ ಅಂತ ನನಗೂ ಒಂದೊಂದು ಸಾರಿ ಅನಿಸಿದ್ದಿದೆ... ಆದೆರೆ ಅವುಗಳೆಲ್ಲಾ ಮೊದಲು ಇಲಿಯಾಗಿ ಬಂದು ಹಾವಿನ ರೂಪ ಪಡೆಯುವುದೇ ಒಂದು ವಿಚಿತ್ರ. ಈ ಸಮಾಜವೇ ಹಾಗೆ. ನಮ್ಮಲ್ಲೂ ಒಂದು ಶಕ್ತಿಯಿದೆ, ನಮ್ಮ ಸಾಧನೆಯಲ್ಲೂ ಶಕ್ತಿಯಿದೆ ಎಂದು ಅರಿಯುವುದೇ ತಡ ಅಲ್ಲಿಗೆ ಜನ ಬರಲು ಆರಂಭಿಸುತ್ತಾರೆ.. ಕೊನೆಗೆ ನಮ್ಮದೇ ಕಾಲೆಳೆಯಲು ಪ್ರಯತ್ನಿಸುತ್ತಾರೆ. ಕೆಲವರು ಅದರಲ್ಲಿ ಸಫಲರಾಗುತ್ತಾರೆ. ಖುಷಿ ಪಡುತ್ತಾರೆ..ಇದಕ್ಕೆ ಉದಾಹರಣೆಗಳು ಒಂದಲ್ಲ. ನೂರಾರು ಇದೆ ಈ ಸಮಾದಲ್ಲಿ.. ಹಾಗಾಗಿ ಮೊನ್ನೆ ಒಬ್ರು ಹೇಳುತ್ತಿದ್ದರು.. ಮನುಷ್ಯರೆಂದರೆ ಉಣ್ಣಿಯ ಹಾಗೆ ..ಏಕೆ ಗೊತ್ತಾ..? ದನದ ಅಥವಾ ಒಂದು ಪ್ರಾಣಿ ಜೀವಂತವಿದ್ದಾಗ ಅದರ ದೇಹದಲ್ಲಿರುವ ರಕ್ತ ಹೀರಲು ಸಾಲು ಸಾಲಗಿ ಬರುತ್ತವೆ.. ಒಂದು ವೇಳೆ ಆ ಪ್ರಾಣಿ ಸತ್ತರೆ ಎಲ್ಲವೂ ಹಾಗೇ ಸಾಲು ಸಾಲಾಗಿ ಇಳಿದು ಹೋಗುತ್ತದೆ....!!! ಇನ್ನೊಂದು ಪ್ರಾಣಿಯ ಅರಸಿಕೊಂಡು....!! ಮನುಷ್ಯನೂ ಹಾಗಂತೆ...!!.

ಇದು ವಿಷಾದವಲ್ಲ...ಇಲ್ಲಿ ಕಾಲ್ಪನಿಕ ...ಆದರೆ ಸತ್ಯ ಘಟನೆ....!!!

ಶನಿವಾರ ೧೫ ಆಗಸ್ಟ್ ೨೦೦೯

ಹಳ್ಳಿಯಿಂದ ರಾಜಧಾನಿವರೆಗೆ ಗಿಡ ಬೆಳೆಸುವ ರಾಷ್ಟ್ರೀಯ ಹಬ್ಬ. . . .




ಸ್ವಾತಂತ್ರ್ಯದ ದಿನ ಎಲ್ಲೆಡೆ ಧ್ವಜಾರೋಹಣ ... ಸಿಹಿ ಹಂಚುವುದು ..ಒಂದಷ್ಟು ಭಾಷಣ... ಕೊನೆಗೆ ಜನಗಣ ಮನ ... ವಂದನಾರ್ಪಣೆ.... ಡಿಸ್‌ಪಸ್... ಇದಿಷ್ಟು ದಿನದ ಕಾರ್ಯಕ್ರಮ.ಇಂದಲ್ಲ ಅನೇಕ ವರ್ಷಗಳಿಂದ ನಡೆದುಕೊಂಡು ಬಂದ ಸಂಗತಿ.ಅದರ ಹೊರತಾಗಿ ಏನೋ ಯಾವುದೂ ಆಗುವುದೂ ಇಲ್ಲ. ಆದರೆ ಇಲ್ಲೊಂದು ಶಾಲೆಯಿದೆ ಇದು ಮಾತ್ರಾ ಇದಕ್ಕಿಂತ ಭಿನ್ನವಾಗಿ ಯೋಚಿಸಿದೆ.ರಾಷ್ಟ್ರೀಯ ಹಬ್ಬವೆಂದರೆ ಅದು ಸಿಹಿ ಹಂಚುವುದಕ್ಕೆ ಮಾತ್ರಾ ಸೀಮಿತವಲ್ಲ. ಅದರಾಚೆಗೂ ಆಲೋಚಿಸಿದೆ ಮತ್ತು ಅನುಷ್ಠಾನಕ್ಕೆ ಕೂಡ ತಂದಿದೆ.ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿದೆ.ರಾಷ್ಟ್ರೀಯ ಹಬ್ಬದಂದು ಇಡೀ ಊರನ್ನೇ ಸ್ವಚ್ಚಗೊಳಿಸುವ ಕೆಲಸಕ್ಕೆ ಮುಂದಾಗಿದೆ ಮಾತ್ರವಲ್ಲ ರಾಜಧಾನಿಯವರೆಗೆ ಗಿಡ ಬೆಳೆಸಬೇಕು ಎನ್ನುವ ಯೋಜನೆ ಹಾಕಿಕೊಂಡಿದೆ. ಹಾಗೆಂದ ಕೂಡಲೇ ಇದು ಖಾಸಗೀ ಶಾಲೆಯಲ್ಲ. 1 ನೇ ತರಗತಿಯಿಂದ 1o ನೇ ತರಗತಿಯವರೆಗೆ ಕ್ಲಾಸ್‌ಗಳಿರುವ ಕೊಠಡಿಗಳು ಸರಿಯಾಗಿಲ್ಲದ ಸರಕಾರಿ ಶಾಲೆ. ಈ ಶಾಲೆಯ ಹೆಸರು “ಸೂರ್ಯ”. ನಿಜಕ್ಕೂ ಇಲ್ಲಿ ಹೊಸ ಚಿಂತನೆಯ “ಸೂರ್ಯ” ಉದಯಿಸಿದ್ದಾನೆ. ಆದರೆ ಅದರ ಬೆಳಕು ಇನ್ನಷ್ಟೇ ಹರಿಯಬೇಕಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಚಿಕ್ಕ ಹಳ್ಳಿ ಸೂರ್ಯ. ಊರು ಚಿಕ್ಕದಾಧರೂ ಸೂರ್ಯನಷ್ಟೇ ಪ್ರಖರವಾದ ಬೆಳಕು ಚೆಲ್ಲಬಹುದಾದ ಸಂಗತಿ ಇಲ್ಲಿದೆ.ಇಲ್ಲಿನ ಸರಕಾರಿ ಶಾಲೆಯೊಂದು ಇಡೀ ರಾಜ್ಯಕ್ಕೆ ಮಾದರಿಯಾಗುವ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಸೂರ್ಯದ ಈ ಸರಕಾರಿ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬದಂದು ಶಾಲಾ ಮಕ್ಕಳು ಊರ ತುಂಬೆಲ್ಲ ತುಂಬಿಕೊಂಡಿರುವ ಕಸಗಳನ್ನು , ಪ್ಲಾಸ್ಟಿಕ್‌ಗಳನ್ನು ಹೆಕ್ಕುತ್ತಾರೆ ಮತ್ತು ಇಡೀ ಊರನ್ನು ಸ್ವಚ್ಛಗೊಳಿಸುತ್ತಾರೆ.ಮಾತ್ರವಲ್ಲ ಊರ ಜನ ಸಂಗ್ರಹಿಸಿಡುವ ಪ್ಲಾಸ್ಟಿಕ್‌ಗಳನ್ನು ವಿದ್ಯಾರ್ಥಿಗಳು ಹೆಕ್ಕಿ ತರುತ್ತಾರೆ.ಊರ ಜನ ಕೂಡಾ ಶಾಲೆಯನ್ನು ಪ್ರೀತಿಯಿಂದ ಕಾಣುತ್ತಾರೆ.ಅದಕ್ಕಾಗಿ ಶಾಲೆಯ ಎದುರೇ “ ಇದು ನಮ್ಮ ಶಾಲೆ, ನಮ್ಮೂರ ಸೂರ್ಯ ಶಾಲೆ” ಎಂದೇ ಸ್ವಾಗತಿಸಲಾಗುತ್ತದೆ. ಹಾಗಾಗಿ ಮಕ್ಕಳಿಗೂ ಊರ ಜನರಿಗೂ ನಂಟು ಬೆಳೆದಿದೆ.ಊರ ಜನ ಕೂಡಾ ಈ ಪ್ಲಾಸ್ಟಿಕ್ ಅಭಿಯಾನದಲ್ಲಿ ಸಹಕರಿಸುತ್ತಾರೆ. ಮಕ್ಕಳು ಹೀಗೆ ಊರಿನಿಂದ ತಂದ ಪ್ಲಾಸ್ಟಿಕ್‌ಗಳನ್ನು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ದಾಖಲಿಸಲಾಗುತ್ತದೆ. ಆ ಬಳಿಕ ಅತೀ ಹೆಚ್ಚು ಪ್ಲಾಸ್ಟಿಕ್ ಹೆಕ್ಕಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡುವ ಮೂಲಕ ಮಕ್ಕಳ ಕೆಲಸಕ್ಕೆ ಉತ್ತೇಜನ ನೀಡಲಾಗುತ್ತದೆ.ಶಾಲಾ ಅಭಿವೃದ್ದಿ ಸಮಿತಿಯು ಹೀಗೆ ಸಂಗ್ರಹವಾದ ತ್ಯಾಜ್ಯವನ್ನು ಮಂಗಳೂರಿನ ತ್ಯಾಜ್ಯ ಘಟಕ್ಕೆ ನೀಡಿ ಮರು ಬಳಕೆಗೆ ಉಪಯೋಗಿಸಲಾಗುತ್ತದೆ. ಹೀಗಾಗಿ ಇಂದು ಸೂರ್ಯ ಎನ್ನುವ ಪುಟ್ಟ ಊರು ಸ್ವಚ್ಚವಾಗಿ ಕಂಗೊಳಿಸುತ್ತಿದೆ. ಸರಕಾರವು ನಿರ್ಮಲ ನಗರ ಯೋಜನೆ ಅನುಷ್ಠಾನಕ್ಕಾಗಿ ಕೋಟ್ಯಂತರ ರುಪಾಯಿ ವ್ಯಯಿಸಿದರೆ ಇಲ್ಲಿ ಖರ್ಚಿಲ್ಲದೆ ಹಮ್ಮಿಕೊಂಡಿರುವ ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ಸಿನ ಹಾದಿಯಲ್ಲಿದೆ.




ಇದೇ ಸಂದರ್ಭದಲ್ಲಿ ಇನ್ನೊಂದು ಯೋಜನೆಯನ್ನು ಇದೇ ಶಾಲೆ ಹಮ್ಮಿಕೊಂಡಿದೆ.ಇದು ಕೂಡಾ ಅದೇ ರಾಷ್ಟ್ರೀಯ ಹಬ್ಬದಂದು ಗಿಡ ನೆಡುವ ಯೋಜನೆ. ಅಂದರೆ ಕಾಟಾಚಾರಕ್ಕಾಗಿ ಇಲ್ಲಿ ಗಿಡ ನೆಡುವುದಲ್ಲ. ಪ್ರತೀ ತರಗತಿಯ ಹೆಸರಿನಲ್ಲಿ ರಸ್ತೆ ಬದಿಯಲ್ಲಿ ಗಿಡ ನೆಡುತ್ತಾರೆ. ಅಂದರೆ ಒಂದು ರಾಷ್ಟ್ರೀಯ ಹಬ್ಬಕ್ಕೆ ೧೦ ಗಿಡ ನೆಡುತ್ತಾರೆ.ವರ್ಷದಲ್ಲಿ ಕನಿಷ್ಠ ೪ ಹಬ್ಬಗಳನ್ನು ಆಚರಿಸುತ್ತಾರೆ. ಹೀಗೆ ನೆಡುವ ಗಿಡ ರಾಜಧಾನಿಯವರೆಗೂ ತಲುಪಬೇಕು ಎನ್ನುವುದು ಈ ಶಾಲೆಯ ಸಂಕಲ್ಪ. ಅಂದರೆ ಇವರ ಯೋಜನೆಗೆ ಉಳಿದ ಶಾಲೆಗಳು, ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎನ್ನುವುದು ಶಾಲಾಭಿವೃದ್ದಿ ಸಮಿತಿಯ ಆಶಯ. ಹೀಗೆ ನೆಡುವ ಗಿಡವನ್ನು ಶಾಲಾ ಮಕ್ಕಳೇ ಆರೈಕೆ ಮಾಡುತ್ತಾರೆ. ಹಾಗೆಂದು ಇಲ್ಲಿ ಉಪಯೋಗಕ್ಕೆ ಬಾರದ ಗಿಡ ನೆಡಲಾಗುವುದಿಲ್ಲ. ಯಾವುದಾದರೂ ಹಣ್ಣಿನ ಗಿಡವನ್ನು ನೆಡಲಾಗುತ್ತದೆ. ಇದರಿಂದ ಮಕ್ಕಳಿಗೂ ಮುಂದೆ ಬಾಯಿ ಸಿಹಿ ಮಾಡಬಹುದಾಗಿದೆ ಎನ್ನವುದು ಯೋಜನೆಯ ಉದ್ದೇಶ.




ಇಲ್ಲಿ ಶಾಲಾ ಪಾಠದೊಂದಿಗೆ ಬಿಡುವಿನ ವೇಳೆಯಲ್ಲಿ ಪಾಠೇತರ ಚಟುವಟಿಕೆ , ಪರಿಸರದ ಬಗ್ಗೆಯೂ ಮಕ್ಕಳಿಗೆ ಹೇಳಲಾಗುತ್ತದೆ. ಇನ್ನು ರಾಷ್ಟ್ರೀಯ ಹಬ್ಬದಂದು ಪರಿಸರ , ವಿಜ್ಞಾನ ಇನ್ನಿತರ ವಿಚಾರಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಕೂಡಾ ಆಯೋಜಿಸಲಾಗುತ್ತದೆ. ಆ ಮೂಲಕ ಮಕ್ಕಳಲ್ಲಿ ಇನ್ನಷ್ಟು ಪರಿಸರ ಜಾಗೃತಿ ಮತ್ತು ಪ್ರಶ್ನೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ ಎನ್ನುತ್ತಾರೆ ಶಾಲಾ ಮುಖ್ಯೋಪಾಧ್ಯಾಯ.

ಶಾಲೆಯ ಇಂತಹ ಚಟುವಟಿಕೆಯಿಂದಾಗಿ ವಿದ್ಯಾರ್ಥಿಗಳು ಈಗ ಪರಿಸರದ ಜಾಗೃತಿ ಬಗ್ಗೆ ಹಾಗೂ ಪರಿಸರ ಉಳಿಸುವ ಬಗ್ಗೆ ಹಿರಿಯರನ್ನೂ ನಾಚಿಸುವ ಹಾಗೆ ಮಾತನಾಡಬಲ್ಲರು. ಒಂದೇ ಉಸಿರಿನಲ್ಲಿ ನಮಗೆ ಇಂತಹ ಯೋಜನೆಗಳು ಬೇಕು ಎನ್ನುತ್ತಾರೆ. ಈ ಶಾಲೆಯಿಂದ ತುಂಬಾ ಕಲಿತಿದ್ದೇವೆ ಎನ್ನುತ್ತಾರೆ ಮಕ್ಕಳು.

ಒಟ್ಟಿನಲ್ಲಿ ಇಂದು ಪರಿಸರ ಜಾಗೃತಿ ಮತ್ತು ಪರಿಸರದ ಉಳಿವಿಗಾಗಿ ಎಳವೆಯಿಂದಲೇ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯಿದೆ. ಆ ನಿಟ್ಟಿನಲ್ಲಿ ಸೂರ್ಯದ ಈ ಸರಕಾರಿ ಶಾಲೆಯಲ್ಲಿ ಸ್ಥಳೀಯರ ಮುಂದಾಳುತ್ವದಲ್ಲಿ ಆಯೋಜಿಸುವ ಇಂತಹ ಕಾರ್ಯಕ್ರಮಗಳೂ ಇಡೀ ರಾಜ್ಯಕ್ಕೆ ವ್ಯಾಪಿಸಬೇಕಾದ ಅಗತ್ಯವಿದೆ. ಆ ಮೂಲಕ ರಾಷ್ಟ್ರೀಯ ಹಬ್ಬಗಳು ಸಾರ್ಥಕತೆಯನ್ನು ಪಡೆಯಬೇಕಾಗಿದೆ. ಸೂರ್ಯದಂತಹ ಶಾಲೆಯಲ್ಲಿ ಉದಯಗೊಂಡ ಇಂತಹ ಯೋಜನೆಯ ಬೆಳಕು ಇಡೀ ರಾಜ್ಯಕ್ಕೆ ವ್ಯಾಪಿಸಲು ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆ ಗುರುತಿಸಬೇಕಾದ ಅಗತ್ಯವೂ ಇದೆ.

ಸೋಮವಾರ ೩ ಆಗಸ್ಟ್ ೨೦೦೯

ಹರಳು ಕಲ್ಲೆಂಬ ಕುಲ ನಾಶಕ . . . .

ಮನುಷ್ಯನ ಅತಿಯಾಸೆಗೆ ಬಲಿಯಾಗದ್ದು ಯಾವುದು ಹೇಳಿ. ಹೆಣ್ಣಿನಿಂದ ಹಿಡಿದು ಮಣ್ಣಿನವರೆಗೆ ಎಲ್ಲವೂ ಅದರೊಳಗೆ ಬೀಳುತ್ತದೆ.ಇಲ್ಲೊಂದು ಅಂತಹುದೇ ಘಟನೆ ಇದೆ. ನೂರಾರು ಎಕ್ರೆ ಪ್ರದೇಶದ ಅರಣ್ಯ ಬರಿದಾಗುವ ಎಲ್ಲಾ ಸೂಚನೆಗಳು ಇವೆ. ಆದರೂ ಕೂಡಾ ಇಲಾಖೆ , ಸರಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದರೆ ಇದರ ಅರ್ಥ ಎಲ್ಲರಿಗೂ ಆಗೇ ಆಗುತ್ತದೆ. ಅಲ್ಲಿ ಮಾಮೂಲು ನಡೆಯುತ್ತೆ ಅಂತ. ಆಧರೂ ನಾವು ನಿಸ್ಸಾಹಕರು ಎಂದರೆ ಏನಿದರ ಅರ್ಥ...???

ಅದು ಸುಳ್ಯ ತಾಲೂಕಿನ ಗಡಿಭಾಗ. ಕೊಲ್ಲಮೊಗ್ರ ಪ್ರದೇಶ. ಇಲ್ಲಿ ಬೆಲೆಬಾಳುವ ಹರಳು ಇದೆ ಎನ್ನುವ ಸಂಗತಿ ಇಂದು ನಿನ್ನೆಯಲ್ಲ ಸರಿಸುಮಾರು 20 ವರ್ಷಗಳಿಂದ ಪ್ರಚಲಿತದಲ್ಲಿದೆ. ಆ ಹರಳು ಕಲ್ಲಿಗೆ ಬೆಲೆಯೂ ಇದೆ ಅಂತ ಊರ ಮಂದಿಯೆಲ್ಲಾ ಹೇಳುತ್ತಾರೆ. ಹಾಗಾಗಿ ಅದರ ಉತ್ಖನನಕ್ಕೂ ತಂಡೋಪ ತಂಡವಾಗಿ ಜನ ಹೋಗುತ್ತಾರೆ. ಎಲ್ಲಿಗೆ ಹೋಗುತ್ತಾರೆ..? ಅದೇ ಮೀಸಲು ಅರಣ್ಯಕ್ಕೆ. ಅಲ್ಲಿನ ಒಂದು ಹುಲ್ಲು ಕಡ್ಡಿ ಅಲುಗಾಡುವುದಕ್ಕೂ ಅರಣ್ಯು ಇಲಾಖೆಯ ಪರ್ಮೀಶನ್ ಬೇಕು ಎನ್ನುವಾಗ ಇಲಿನ ಜನ ಅದ್ಹೇಗೆ ಅದರೊಳಗೆ ಗಂಟೆ ಗಟ್ಟಲೆ ಅಲ್ಲಿ ಹರಳು ಕಲ್ಲಿಗಾಗಿ ಅಗೆಯುತ್ತಾರೆ.? ಅದರಲ್ಲೇ ಇರುವುದು ಕುತೂಹಲ. ನನಗೆ ಆ ಪ್ರದೇಶಕ್ಕೆ ಹೋದಾಗ ಅಲ್ಲಿನ ಗಾಳೀ ಸುದ್ದಿಯ ಮೂಲಕ ತಿಳಿದ ವಿಷಯವೆಂದರೆ ಈ ಹರಳು ಕಲ್ಲಿನ ಪ್ರಮುಖ ದಂಧೆಕೋರರು ಇಲಾಖೆಗೆ ಮತ್ತು ಅಧಿಕಾರಿ ವರ್ಗಕ್ಕೆ 17 ಲಕ್ಷ ರುಪಾಯಿಯನ್ನು ನೀಡಿದ್ದರಂತೆ. ಹಾಗಗಿ ಅಧಿಕಾರಿಗಳು ಕಣ್ಣು ಈಗ ಕುರುಡಾಗಿದೆ ಅಂತ ಸುದ್ದಿಯ ಮೇಲೆ ಸುದ್ದಿ ಬರುತ್ತಿತ್ತು. ವಿಷಯದ ಒಳಹೊಕ್ಕಾಗ ಆ ಗಾಳಿ ಸುದ್ದಿಗೆ ಜೀವ ಬಂದದ್ದಂತೂ ಸತ್ಯ. ಹೀಗೆ ಹರಳು ಕಲ್ಲು ದಂದೆ ನಡೆಯುತ್ತಿರುವುದು ಸರಿ ಸುಮಾರು 20 ವರ್ಷಗಳಾಗಬಹುದು. ಆದರೂ ಇದುವರೆಗಿನ ಸರಕಾರ ಯಾವುದೇ ರೀತಿಯಲ್ಲಿ ಅದನ್ನು ಉಳಿಸಿಕೊಳ್ಲುವ ಪ್ರಯತ್ನ ಮಾಡಿಲ್ಲ. ಅದಕ್ಕೂ ಕಾರಣವಿದೆ.ಸರಕಾರದ ಪ್ರಕಾರ ಅದು ಬೆಲೆಬಾಳುವ ಕಲ್ಲು ಅಲ್ಲವಂತೆ. ಹಾಗಾಗಿ ಈ ಪ್ರದೇಶದತ್ತ ಗಮನ ಹರಿಸಿಲಲ್ಲ. ದುರಂತವೆಂದರೆ ಈಗ ಇಲ್ಲಿ ಕಲ್ಲು ಅಗೆಯುವ ಜನಕ್ಕೆ ಪ್ರತೀ ಕೆಜಿಗೆ 2 ರಿಂದ 3 ಸಾವಿರ ಸಿಗುತ್ತಂತೆ. ಅದರಾಚೆಗೆ ಈ ಕಲ್ಲು ತಲುಪಿದರೆ 15 ಸಾವಿರದವರೆಗೆ ಸಿಗುತ್ತಂತೆ.

ಈಗಾಗಲೇ ಕಲ್ಲು ಅಗೆತದಿಂದ ನೂರಾರು ಎಕ್ರೆ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ.ಕಾಡಿನ ನಡುವೆ ಅಲ್ಲಲ್ಲಿ ಹೊಂಡಗಳು ಇದೆ.ಆ ಹೊಂಡಗಳು ಮಳೆಗಾಲದಲ್ಲಿ ಕುಸಿತಗೊಂಡು ಮರಗಳೂ ನಾಶವಾಗುತ್ತದೆ.ಇದು ಹೀಗೆ ಇನ್ನು ಒಂದು ೫ ವರ್ಷ ನಡೆದರೆ ಇಡೀ ಕಾಡು ನಾಶವಾದರೆ ಅಚ್ಚರಿಯಿಲ್ಲ. ಆದರೂ ನಮ್ಮ ಸರಕಾರಗಳು ಇತ್ತ ಗಮನಹರಿಸಿಲ್ಲ ಎನ್ನುವುದೇ ದುರಂತದ ಸಂಗತಿಯಾಗಿದೆ.

ಇಲ್ಲಿನ ಪತ್ರಿಕೆಗಳು ಅದೆಷ್ಟೋ ಬಾರಿ ಈ ಕರ್ಮಕಾಂಡಗಳ ಬಗ್ಗೆ ವರದಿ ಪ್ರಕಟಿಸಿದೆ. ಆದರೂ ಕೂಡಾ ಎಲುಬಿಲ್ಲದೆ ಇಲಾಖೆಗಳು ಒಂದೇ ಒಂದು ಬಾರಿ ಕೂಡಾ ಈ ದಂಧೆಯನ್ನು ನಿಲ್ಲಿಸಲು ಪ್ರಯತ್ನ ಪಟ್ಟಿಲ್ಲ. ಇನ್ನೂ ಒಂದು ಅಂಶವೆಂದರೆ ಇಲ್ಲಿರುವ ಅಧಿಕಾರಿಗಳೆಲ್ಲರೂ ನಿವೃತ್ತಿ ಅಂಚಿನಲ್ಲಿರುವವರು. ಸರಿಯಾದ , ದಕ್ಷ ಅಧಿಕಾರಿಯೂ ಇಲ್ಲಿಗೆ ವರ್ಗ ಮಾಡದೇ ಇರುವುದು ಕೂಡಾ ಇಲಾಖೆಯ ಇನ್ನೊಂದು ಗಟ್ಟಿನತ. ಆದುದರಿಂದ ಈ ಕಲ್ಲಿನ ದಂದೆ ಹೇಗೆ ತಡೆಯಲು ಸಾಧ್ಯವಾದೀತು..?.

ಸೋಮವಾರ ೨೭ ಜುಲೈ ೨೦೦೯

ಬಂದೇ ಬರುತಾನ ಅವ..



ಅಂದು ಸಂಜೆಯಿಂದ ಇಡೀ ಸಂಚಲನ... ಸಚಿನ್ ಬರ್ತಾರಾ.... ಸಚಿನ್ ತೆಂಡೂಲ್ಕರ್ ಬರ್ತಾರಾ..ಅಂತ ಫೋನಿನ ಮೇಲೆ ಫೋನು.. ನಂಗೂ ಅದೇ ಕೆಲ್ಸ ಅಲ್ಲಿ - ಇಲ್ಲಿ ಫೋನ್ ಮಾಡಿ ಮಾಹಿತಿ ಸಂಗ್ರಹಿಸುವುದೇ ಕೆಲಸವಾಗಿತ್ತು. ಅಂತೂ ರಾತ್ರಿ ೧೧ ರ ವರೆಗ ಅದೇ ಕೆಲಸ. ಏಕೆಂದರೆ ... ಅವರು.. ಇವರು.. ಆಗಲೇ ಸುಬ್ರಹ್ಮಣ್ಯ ತಲಪಿಯಾಗಿತ್ತು. ಆಧರೆ ಕೊನೆಯ ಮಾಹಿತಿಯೊಂದು ಸಿಕ್ಕಿತ್ತು. ಅದೆಲ್ಲಾ ಸುಳ್ಳೇ... ಸುಳ್ಳು ಅಂತ. ಆದರೂ ಒಂದು ಸಂಶಯ...

ಬೆಳಗ್ಗೆ 6 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಡಬೇಕು ಅಂದು ಕೊಂಡವನಿಗೆ ಎಚ್ಚರವಾದ್ದೇ 6 ಗಂಟೆಗೆ. ಏಕೆಂದರೆ ಮುಂಜಾನೆ 4 ಗಂಟೆಗೆ ಅದೇ ವಿಚಾರದಲ್ಲಿ ಬಂದ ಮಿತ್ರನ ಕರೆಯನ್ನು ಸ್ವೀಕರಿಸಿ ಮಲಗಿದ ಕಾರಣ ಎಚ್ಚರವಾಗುವಾಗ ತಡವಾಗಿತ್ತು. ಅಂತೂ 6.30 ಕ್ಕೆ ಕುಕ್ಕೆಗೆ ಹೊರಟು ವೇಗದಲ್ಲಿ ಸಾಗಿ 6.45 ಕ್ಕೆ ತಲಪಿಯಾಗಿತ್ತು. ಅಲ್ಲಿ ಅದಾಗಲೇ ಒಂದಷ್ಟು ಜನ ಮಿತ್ರರು ಸೇರಿದ್ದರು. ಕಾಯುತ್ತಾ ಕುಳಿತಿದ್ದರು. ಯಾರಿಗೆ ...? ಅದೇ ಸಚಿನ್‌ಗೆ..!!!. ಸರಿ ಎಲ್ಲರೂ ಅವರವರ ಕತೆ ಹೇಳುತ್ತಿದ್ದರು.. ಬೆಳಗ್ಗೆ 3 ಗಂಟೆಗೆ ಎದ್ದು ಹೊರಟವರಿದ್ದರು ಅಲ್ಲಿ...!!! . ಕಾಫಿ ತಿಂಡಿಯಾಗದವರೂ ಇದ್ದರು.. ಎಲ್ಲರೂ ದೇವಸ್ಥಾನದ ಗೋಪುರದ ಎದುರು ಕುಳಿತದ್ದೇ ಕುಳಿತದ್ದು... ಕುಕ್ಕೆಯಲ್ಲಿರುವ ಪರಿಚಯದವರೆಲ್ಲಾ ಏನು ಎಲ್ಲಾ ಇದ್ದೀರಿ ಅಂಥ ಸಣ್ಣಗೆ ಕೇಳುತ್ತಿದ್ದರು. ಹಾಗೆ 8 ಕಳೆಯಿತು... ಒಂದು ಕಾರು ಬಂದರೂ ಎಲ್ಲರ ಕ್ಯಾಮಾರ ರೆಡಿಯಾಗುತ್ತಿತ್ತು... ಎಲ್ಲರೂ ಎಲರ್ಟ್...!!. ಅಂತೂ ಗಂಟೆ 9 ಕಳೆಯಿತು... ಸುದ್ದಿಯಿಲ್ಲ.. ಸ್ಪಷ್ಟ ಮಾಹಿತಿಯೂ ಇಲ್ಲ..!! ಆದರೂ ಕುಳಿತಿತು... ಒಬ್ಬೊಬ್ಬರು ಒಂದೊಂದು ಅಭಿಪ್ರಾಯಕ್ಕೆ ಬರತೊಡಗಿದರು.. 9.15 ರ ನಂತರ ಇನ್ನು ಹೋಗೋಣ ಅಂತ ಮಾತನಾಡಲು ತೊಡಗಿದರು.. ಆಧ್ರೆ ಯಾರೂ ಕದಲುವುದಿಲ್ಲ.. ಏಕೆಂದರೆ ಎಲ್ಲಾದರೂ ಆತ ಬಂದರೆ...!!!.. ಸರಿ 9.30 ಕ್ಕೆ ದೇವಸ್ಥಾನದ ಒಳಗೆ ಹೋಗಿ ಪೂಜೆಯ ಚಿತ್ರ ತೆಗೆದು ಹೊರಬಂದು ಎಲ್ಲರೂ ಹಿಂತಿರುಗುವ ಯೋಚನೆ ಮಾಡಿದರು. ಮತ್ತೆ ಒಬ್ಬೊಬ್ಬರು ವಿಚಾರಣೆಗೆ ತೊಡಗಿದರು. ಆತ ನೇರವಾಗಿ ಮುಂಬೈಗೆ ಹೋಗ್ತಾನಂತೆ 11 ಗಂಟೆಗೆ ಫ್ಲೈಟಂತೆ.. ಹಾಗಾಗಿ ಸುಬ್ರಹ್ಮಣ್ಯಕ್ಕೆ ಬರುವುದಿಲ್ಲ ಎಂಬ ಮಾಹಿತಿ ಬಂತು.. ಎಲ್ಲರೂ ಅತ್ತಿತ್ತ ಹೋಗಿ ಮಾಯವಾದರು.

ಆದರೂ ಮತ್ತೆಮತ್ತೆ ಕರೆ ಬರುತ್ತಿತ್ತು.. ಇಲ್ಲ ಶೇ.99 ಅವರು ಬಂದೇ ಬರ್ತಾರೆ... ಮಾತ್ರಾ, ಗುಪ್ತವಾಗಿದೆ ಅಂತ..!! ಆದರೆ ಸಚಿನ್ ಅದಾಗಲೇ ಬಜ್ಪೆ ವಿಮಾನ ನಿಲ್ದಾಣದಲ್ಲಿದ್ದನ್ನು ಖಚಿತ ಪಡಿಸಿಕೊಂಡ ನಾವು ..ಸರಿ ಬಂದ್ರೆ ಹೇಳಿ ನಾವಿಲ್ಲೇ ಇದ್ದೇವೆ ಅಂತ ಹೇಳಿ ನಾವೂ ಮಾಯವಾದೆವು...

ಕೊನೆಗೂ ಸಚಿನ್ ಬರಲಿಲ್ಲ...!!.. ಇದೆಲ್ಲಾ ಗೊಂದಲ ಆದ್ದು ಯಾರಿಂದ ಸುದ್ದಿ ಮಾಡಿದ್ದು ಯಾರು.. ಎಂಬ ಕಣ್ಣ ಎದುರಿನ ಪ್ರಶ್ನೆಗೆ ಉತ್ತರ ಅಲ್ಲೇ ಇತ್ತು....!!!..

ನಮಗೆ ಮಾತ್ರಾ ಅಲ್ಲಿ ಕಾದದ್ದು ಒಂದು ಅನುಭವವಾಗಿತ್ತು..

ಶುಕ್ರವಾರ ೧೦ ಜುಲೈ ೨೦೦೯

ಮಾತು...ಮುಗಿದ ಮೇಲೆ...


ಮಾತೆಲ್ಲಾ ಮುಗಿದ ಮೇಲೆ.. ಮನದೊಳಗೆ ಮೌನದ ಕೋಣೆ....

ಹೋದಲ್ಲೆಲ್ಲಾ ಮಾತು-ಕತೆ.. ಅದರಲ್ಲಿ ಹುರುಳೆಷ್ಟು..? ಪುಕ್ಕಟೆ ಎಷ್ಟು...? ಬಡಾಯಿ ಎಷ್ಟು...? ಮಾತಿಗಾಗಿ ಮಾತೆಷ್ಟು...? ಅಂತ ಒಂದು ಕ್ಷಣ ಯೋಚಿಸಿದರೆ, ಹುರುಳು ಎಷ್ಟು ಸಿಕ್ಕಾವು ಹೇಳಿ...? ಸುಮ್ಮನೆ ದಿನವಿಡೀ .. ಮಾತು.. ಮಾತು ... ಮಾತು... ಹಾಗೆ ಮಾತನಾಡುವಾಗ ನಾವು ಕೆಲವೊಮ್ಮೆ ನೇರವಾಗಿ[ ಕಣ್ಣಿಗೆ ಕೈ ಹಾಕಿದ ಹಾಗೆ] ಹೇಳಿ ಬಿಡುತ್ತೇವೆ... ಎದುರಿನಾತನಿಗೆ ಏನಾಗುತ್ತದೆ... ಅದರ ಪರಿಣಾಮ ಏನು ಎನ್ನವುದರ ಬಗ್ಗೆ ಆ ಕ್ಷಣ ಯೋಚಿಸುವುದಿಲ್ಲ ಮಾತು ಮಾತಾಗಿ ಹೋಗುತ್ತದೆ.. ಪರಿಣಾಮ ನಂತರ.... ಆದರೆ ಅದು ತಪ್ಪಾಗಿದ್ದರೂ ಮತ್ತೆ ಉಳಿಯುವುದು ಸಮರ್ಥನೆಯೊಂದೇ ದಾರಿ.. ಹೀಗಾಗಿ ಅದೆಷ್ಟೂ ಸಂಬಂಧಗಳೂ ಕಡಿದುಹೋಗಿವೆ.

ಇದ್ಯಾಕೆ ನೆನಪಾಯಿತೀಗ.. ??

ಮೊನ್ನೆ ನಾವು ಸುದ್ದಿಯೊಂದನ್ನು ಮಾಡುವುದಕ್ಕಾಗಿ 3 ಜನ ಮಿತ್ರರು ಒಂದು ಪ್ರತಿಷ್ಠಿತ ಶಾಲೆಗೆ ಹೋಗಿದ್ದೆವು. ಅಲ್ಲಿನ ಪ್ರಮುಖ ಅಧ್ಯಾಪಕರೊಬ್ಬರು 2 ವಾರದಿಂದ ದೂರವಾಣಿ ಮೂಲಕ ಹೇಳುತ್ತಲೇ ಇದ್ದರು. ಹಾಗಾಗಿ ಬಿಡುವು ಮಾಡಿ ಅಲ್ಲಿಗೆ ತೆರಳಿದ್ದಾಯಿತು. ಮೊದಲು ಹೋದವರೇ ಪ್ರಾಂಶುಪಾಲರ ಕೊಠಡಿಗೆ ಹೋಗಿ ಮಾತನಾಡಲು ಆರಂಭಿಸಿದೆವು. ಅಲ್ಲಿನ ವಿಚಾರ “ಲೋಕ”ದ ವಿಚಾರವೂ ಮಾತಿನ ನಡುವೆ ಬಂತು. ಆಗ ಅಲ್ಲಿಗೆ ನಮಗೆ ದೂರವಾಣಿ ಮೂಲಕ ಸುದ್ದಿ ಹೇಳಿದ ಅಧ್ಯಾಪಕರೂ ಬಂದರು. ನಮ್ಮ ಪರಿಚಯವನ್ನೂ ನಾವು ಹೇಳಿದೆವು. ಅವರು ಮತ್ತೆ ನನ್ನಲ್ಲಿ ಕೇಳಿದರು.... ನಿಮ್ಗೆ ಈ ವಿಷ್ಯ ಹೇಗೆ ಗೊತ್ತಯ್ತಾ ಅಂತ.. ನಾನಂದೆ ನೀವೇ 2 ವಾರದಿಂದ ಫೋನು ಮಾಡ್ತಿದ್ದೀರಲ್ಲಾ ಅಂತ.. ಆಗ ಅವರಂದ್ರು .. ನಿಮ್ಗೆ ಫೋನು ಮಾಡಿಲ್ಲ .. ನಾನು ಇವರಿಗೆ [ ನನ್ನೊಂದಿಗೆ ಬಂದ ನನ್ನ ಮಿತ್ರ] ಮಾತ್ರಾ ಫೋನು ಮಾಡಿದ್ದು ಎಂದು ಹೇಳಿದ್ರು. ಆಗ ನಂಗಂತೂ ಒಮ್ಮೆ ಶಾಕ.. ಮೌನ... ಮತ್ತೆ ಸಡನ್ ಆಗಿ ಕೇಳಿದೆ.. “ ಹಾಗಿದ್ರೆ ನಾನು ಬಂದಿದ್ದು ತಪ್ಪಾಯ್ತು ಅಂತೀರಾ” ಅಂತ ಹೇಳಿ ಬಿಟ್ಟೆ.. ಮತ್ತೆ ಒಮ್ಮೆ ಮೌನ.. ಕೂಡಲೇ ಪ್ರಾಂಶುಪಾಲರು ಹೇಳಿದ್ರು ಅಲ್ಲ ನಿಮ್ಗೆ ಹೇಗೆ ಗೊತ್ತಾಯ್ತು ಅಂತ ಕ್ಯೂರಿಯಾಸಿಟಿ ಅಂತ..... ಸರಿ ಸಂತ ನಾವು ಸುದ್ದಿಯತ್ತ ಹೋದೆವು.. ಆ ವಿಷಯ ಅಲ್ಲಿಗೇ ಬಿಟ್ಟು.. ಆದ್ರೆ ಮತ್ತೆ ಆ ಅಧ್ಯಾಪರು ಹೇಳಿದ್ರು .. ಅಲ್ಲ ನಿಮ್ಗೆ ಆಗ ನಾನು ಹಾಗೆ ಹೇಳಿದ್ದು ಬೇಸರ ಆಯ್ತಾ ಅಂತ ಕೇಳಿದ್ರು.. ಇಲ್ಲ ಇಲ್ಲ ಅಂತ ನಾನು ಆಗಲೇ ಆ ವಿಷಯ ಬಿಟ್ಟಾಯ್ತು ಅಂತ ಹೇಳಿದೆ.......

ಇದೊಂದು ಚಿಕ್ಕ ಘಟನೆ...

ಆದ್ರೆ ನಂಗೆ ಮತ್ತೆ .. ಮತ್ತೆ ಆ ವಿಷಯ ದಿನವಿಡೀ ಕಾಡುತ್ತಲೇ ಇತ್ತ... ನಾನು ಹಾಗೆ ಅಲ್ಲಿ ಹೇಳಿದ್ದು ಸರಿಯಾ .. ತಪ್ಪಾ... ನನ್ನನ್ನು ನಾನು ಸಮರ್ಥಿಸಿಕೊಳ್ಳುವುದು ಇದ್ದದ್ದೇ ... ಹಾಗಾಗಿ ಆ ಬಗ್ಗೆ 3 ನೇ ವ್ಯಕ್ತಿಯಾಗಿ ಚರ್ಚಿಸಿದೆ.. ಮಿತ್ರರೊಂದಿಗೆ ಆ ಬಗ್ಗೆ ಮಾತಾಡಿದೆ... 2 ರೀತಿಯ ಅಭಿಪ್ರಾಯ ಬಂತು.... ಆದರೂ ನನಗೆ ಸಮಾಧಾನ ತಾರದ ವಿಷಯ ಅದಾಯಿತು.

ಆ ಬಳಿಕ ಆದರೆ ನಂಗನಿಸಿತು .. ನನ್ನೊಳಗೆ ಅದೆಲ್ಲೋ ಅಹಂ ಆಗ ಕುಳಿತಿತ್ತಾ..?? ನಿಜಕ್ಕೂ ಅಧ್ಯಾಪಕ ಹೇಳಿದ ರೀತಿ ಯಾವುದು ಎಂಬುದರ ಬಗ್ಗೆ ನಾನು ಯಾಚಿಸದೆ ಆ ಕ್ಷಣದ ನನ್ನ ಪ್ರತಿಕ್ರಿಯಿಂದ ಅವರಿಗೂ ನೋವಾಗಿದೆ. ಅಂತ ನನಗೆ ಅನಿಸಿತು.. ನನಗೂ ಅವರ ಮಾತು ಆ ಕ್ಷಣಕ್ಕ ನೋವು ತಂದದ್ದೂ ಅಷ್ಟೇ ಸತ್ಯ. ಯಾಕೆಂದರೆ ನಾನು ಕೆಲಸ ಮಾಡುವ ಸಂಸ್ಥೆ ನನಗೆ ದೊಡ್ಡದೇ.... ಹಾಗಾಗಿ ಮತ್ತೊಮ್ಮೆ ನನ್ನೊಳಗೆ ನಾನು ಸಮರ್ಥಿಸಿಕೊಂಡೆ...

ಆದರೆ ಅನೇಕ ಸಲ ನನಗೆ ಅನಿಸಿದ್ದಿದೆ.. ಅದೆಲ್ಲೋ ಅಹಂ ಎನ್ನುವುದು ನನ್ನೊಳಗೆ ಸೇರಿಕೊಂಡಿದೆಯಾ..? ಹಾಗಾಗಿ ನನ್ನೊಳಗಿನಿಂದ ಕೆಲ ಮಾತುಗಳು ಹಾಗೆ ಹೇಳಿಸಿದೆಯಾ..? ಇಲ್ಲ ಹಾಗಾಗದಂತೆ ಎಚ್ಚರಿಕೆ ವಹಿಸಬೇಕು...

ಏಕೆಂದರೆ ಮಾತು ಅನ್ನುವುದು ಆಡಿದರೆ ಮುಗಿಯಿತು... ಅದು ದಾಖಲಾಗಿ ಬಿಡುತ್ತದೆ... ಮತ್ತೆ ಹಿಂದೆ ಸರಿಯಬಾರದು.... ಸರಿಯಲೂ ಆಗದು... ಅದು ನೇರವಾಗಿ ಇರಬೇಕು... ಮಾತಿಗೆ ಇಷ್ಟವಿಲ್ಲದಿದ್ದೆ ಮೌನವೇ ಉತ್ತರವಾಗಬೇಕು... ಹಾಗಾಗಿಯೇ ಅಂದು ನಾನು ಮೌನಿಯಾದ್ದು....

ಹಾಗಾಗಿ... ಮಾತು ಮುತ್ತು .. ಮೌನ ಬಂಗಾರ....!!!

ಸೋಮವಾರ ೬ ಜುಲೈ ೨೦೦೯

ಇಲ್ಲಿ ಡಿಗ್ರಿ ಓದಿದವರು ಇಬ್ಬರೇ....!!




ಒಂದು ಕಡೆ ನಾಗಾಲೋಟದಿಂದ ಓಡುವ ನಗರಗಳು.ಇನ್ನೊಂದು ಕಡೆ ಅಭಿವೃದ್ದಿಯ ಹೆಸರಿನಲ್ಲಿ ಬದಲಾವಣೆಯನ್ನು ಕಾಣುವ ಸಮಾಜ.ಇದೆಲ್ಲದರ ಭ್ರಮೆಯಲ್ಲಿ ಇಡೀ ಜಗತ್ತು ಬದಲಾಗಿದೆ ಎನ್ನುವ ತಲೆಭಾರ... ಆದರೆ ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ.?.

ಅದರಾಚೆಗೆ ಬಂದು ನೋಡಿದಾಗಲೂ ಕಾಣುವುದು ಅದೇ ಬದಲಾವಣೆ..ಅದೇ ಅಭಿವೃದ್ದಿಯ ಮಂತ್ರ.

ಇತ್ತೀಚೆಗೆ ಹಿರಿಯ ಅಧಿಕಾರಿಗಳೊಬ್ಬರ ಜೊತೆ ಮಾತನಾಡುತ್ತಿದ್ದಾಗ ಇದೇ ಅಭಿವೃದ್ದಿಯ ಅದರಲ್ಲೂ ನಗರದ ಸುಂದರ ಕಲ್ಪನೆ ಮತ್ತು ಅದರ ಬದಲಾವಣೆಯ ಬಗ್ಗೆ ಕೇಳುತ್ತಿದ್ದಾಗ ಅವರು ಇನ್ನೊಂದು ಮಗ್ಗುಲಲ್ಲಿ ಅದನ್ನು ಯೋಚಿಸುವ ದಾರಿ ತೋರಿಸಿದರು.ನಂತರ ಅವರು ವಿವರಿಸಿದರು ನಗರವೊಂದರ ರಸ್ತೆ ಅಗಲೀಕರಣ ಉದಾಹರಣೆಯನ್ನು ಕೊಡುತ್ತಾ ನಗರದ ರಸ್ತೆ ಅಗಲೀಕರಣದಿಂದಾಗಿ ಸಲ್ಲಿರುವ ಹತ್ತಾರು ಗೂಡಂಗಡಿಗಳು ಮಾಯವಾಗುತ್ತದೆ. ರಸ್ತೆ ಅಗಲವಾತ್ತದೆ. ಪಾರ್ಕಿಂಗ್‌ಗೆ ಜಾಗವಾಗುತ್ತದೆ. ವಾಹನಗಳ ಸುಲಭ ಸಂಚಾರವಾಗುತ್ತದೆ. ಇದರಿಂದಾಗಿ ಸಾಮಾನ್ಯ ಜನರಿಗೆ, ಹಳ್ಳಿ ಜನರಿಗೆ ಏನು ಪ್ರಯೋಜನ..?. ಅಲ್ಲಿ ಮತ್ತೆ ದುಪ್ಪಟ್ಟು ವ್ಯಾಪಾರವಾಗುವುದು ಅದೇ ಶ್ರೀಮಂತ ವ್ಯಾಪಾರಿಗೆ. ಬಡ ಗೂಡಂಗಡಿ ವ್ಯಾಪಾರಿಗೆ ಏನು ಗತಿ..? ಹಾಗೆಂದು ರಸ್ತೆ ಅಗಲೀಕರಣವಾಗಲಿ, ನಗರ ಅಭಿವೃದ್ದಿ ಆಗಬಾರದು ಎನ್ನುವ ಧೋರಣೆ ಇದಲ್ಲ. ನಿಜಕ್ಕೂ ನಗರದ ಅಭಿವೃದ್ದಿ ಇಂದು ಅಗತ್ಯಕ್ಕಿಂತ ಹೆಚ್ಚಾಗಿ ನಡೆದರೆ ಅದೇ ಒಂದು ಹಳ್ಳಿಯ , ಒಂದು ಗ್ರಾಮದ ಅಭಿವೃದ್ದಿ ಅದೇ ವೇಗದಲ್ಲಿ ನಡೆಯುತ್ತಿಲ್ಲ. ಆದರೂ ನಾವು ಅದೇ ನಗರದ ಅಭಿವೃದ್ದಿ ನೋಡಿ ಭಾರತ ಅಭಿವೃದ್ದಿಯ ಪಥದಲ್ಲಿದೆ ಅಂತ ಕರೀತೇವೆ. ಆದರೆ ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ..?

ಅದಕ್ಕೆ ಒಂದು ಹಳ್ಳಿಯ ಕಡೆಗೆ ಹೋಗ ಬೇಕು. ಆಗ ಅಲ್ಲಿನ ಸತ್ಯ ದರ್ಶನವಾಗುತ್ತದೆ. ಇಂದಿಗೂ ಅದೆಷ್ಟೂ ಹಳ್ಳಿಗಳು ಬೆಳಕನ್ನೇ ಕಂಡಿಲ್ಲ.ಅಂತಹ ಹಳ್ಳಿಯೊಂದರ ಕತೆ ಇಲ್ಲಿದೆ.

ಅದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗಡಿಭಾಗದಲ್ಲಿರುವ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮ.ಪುತ್ತೂರಿನಿಂದ ಸರಿಸುಮಾರು 60 ರಿಂದ 70 ಕಿಲೋ ಮೀಟರ್ ದೂರದಲ್ಲಿದೆ. ಹಾಗೆ ನೋಡಿದರೆ ಈ ಗ್ರಾಮಗಳು ಸೌಲಭ್ಯಗಳಿಂದಲೂ ದೂರವೇ ಇದೆ. ಈ ಗ್ರಾಮದಲ್ಲಿನ ಬಾರ್ಯ, ಬೊಟ್ಟಡ್ಕ ಪ್ರದೇಶದಲ್ಲಿ 30 ಮನೆಗಳಿವೆ. ಇವರಿಗೆ ಅಭಿವೃದ್ದಿ ಎಂಬುದು ಮರೀಚಿಕಯೇ ಸರಿ.ಸ್ವಾತಂತ್ರ್ಯ ಬಂದು ೬ ದಶಕಗಳೇ ಕಳೆದರೂ ಈ ಭಾಗ ಇನ್ನೂ ಬೆಳಕು ಕಂಡಿಲ್ಲ. ಅದು ಮಾತ್ರವಲ್ಲ ವ್ಯವಸ್ಥಿತವದ ರಸ್ತೆ ಸಂಪರ್ಕ, ಸೇತುವೆಗಳೂ ಈ ಗ್ರಾಮಕ್ಕಿಲ್ಲ.ಇಲ್ಲಿನ ಜನರ ಬದುಕೇ ಒಂದು ಸರ್ಕಸ್.ಇವರು ಅರ್ಜೆಂಟಾಗಿ ಪೇಟೆಗೆ ಹೋಗಬೇಕು ಅಂದ್ರೆ ಇಲ್ಲಿನ ಜನ ಐದಾರು ಕಿಲೋಮೀಟರ್‌ಗಳಷ್ಟು ದೂರ ನಡೆದೇ ಸಾಗಬೇಕು. ಮೊಬೈಲ್ ಸಂಪರ್ಕವಂತೂ ಇಲ್ವೇ ಇಲ್ಲ.ದೂರವಾಣಿಯೂ ಇಲ್ಲಿಗೆ ದೂರವಾಗಿದೆ. ಅದು ಬಿಡಿ ಮಳೆಗಾಲವಂತೂ ಇವರ ಬದುಕು ದ್ವೀಪದಂತಾಗುತ್ತದೆ. ಬಾರ್ಯವನ್ನು ಸಂಪರ್ಕಿಸುವ ನಿಡ್ಯಮೇರು ಎಂಬ ಹೊಳೆ ತುಂಬಿ ಹರಿಯುವ ಕಾರಣದಿಂದ ಇರುವ ರಸ್ತೆ ಸಂಪರ್ಕವೇ ಕಡಿದುಹೋಗುತ್ತದೆ. ಆಗ ತಾತ್ಕಾಲಿಕವಾಗಿ ನಿರ್ಮಿಸಿದ ಕಾಲುಸಂಕದಲ್ಲಿ “ಸರ್ಕಸ್” ಮಾಡಿ ಅನಿವಾರ್ಯವಾಗಿ ಸಾಗಬೇಕು. ಹೀಗಾಗಿ ಹೊರ ಜಗತ್ತಿನ ಸಂಪರ್ಕವೇ ಅವರಿಗಿಲ್ಲ.ಇನ್ನು ಜೀಪು ಹೊರತು ಪಡಿಸಿ ಬೇರಾವ ವಾಹನಗಳು ಇಲ್ಲಿ ಓಡಾಡಲ್ಲ. ಹಾಗಾಗಿ ಜೀಪಿನ ಹೊರತಾಗಿ ಬೇರೆ ವಾಹನದ ಪ್ರಯಾಣ ಇಲ್ಲಿ ಇವರಿಗೆ ಕನಸೇ ಸರಿ.ಅದು ಬಿಡಿ ನಗರದಲ್ಲಿರುವಂತೆ ಮನೆಗೆರಡರಂತೆ ಇಲ್ಲಿ ವಾಹನವೇ ಇಲ್ಲ.ಈ ಬಾಗದಲ್ಲಿ ಸ್ವಂತ ವಾಹನ ಇರುವವರೇ ಇಲ್ಲ. ಎಲ್ಲರಿಗೂ ಕಾಲುಗಳೇ ಆಧಾರ.ಅಲ್ಲಿಂದ ನಂತರ ಗ್ರಾಮಕ್ಕೆ ಬರುವ ಒಂದೆರಡು ಸರಕಾರಿ ಬಸ್ಸು....!!. ಇನ್ನು ಇಲ್ಲಿನ 30 ಮನೆಗಳಲ್ಲಿ ಪದವಿ ಶಿಕ್ಷಣ ಪಡೆದವರು ಕೇವಲ ಇಬ್ಬರು. .4ಮಂದಿ ಪಿಯುಸಿ ಶಿಕ್ಷಣ ಪಡೆದರೆ ಇನ್ನು ಬಹುತೇಕರು ಎಸ್.ಎಸ್.ಎಲ್.ಸಿಯಲ್ಲಿ ಶಾಲೆ ಬಿಡಬೇಕಾದ ಸಂದರ್ಭವೇ ಹೆಚ್ಚು.


ಬೌಗೋಳಿಕವಾಗಿ ನೋಡಿದರೆ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮವು ಒಟ್ಟು 17,118 ವಿಸ್ತೀರ್ಣವಿದೆ.ಇದರಲ್ಲಿ ಬಹುಪಾಲು ಅರಣ್ಯ ಪ್ರದೇಶ. ಹಾಗಾಗಿ ಈ ಗ್ರಾಮ ವಿಸ್ತಾರವಾಗಿದ್ದರೂ ಗ್ರಾಮ ಪಂಚಾಯತ್‌ಗೆ ಆದಾಯ ಕಡಿಮೆಯೇ. ಹಾಗೆಂದು ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆಯನ್ನು ವಿವರಿಸಿದರೆ ಅರ್ಥವೂ ಆಗುತ್ತಿಲ್ಲ. ಇದುವರೆಗೆ ಒಬ್ಬ ಜನಪ್ರತಿನಿಧಿ ಮಾತ್ರಾ ಈ ಭಾಗಕ್ಕೆ ಭೇಟಿ ಕೊಟ್ಟು ಸಮಸ್ಯೆ ಆಲಿಸಿದ್ದು ಬಿಟ್ಟರೆ ಬೇರಾವ ಜನನಾಯಕರೂ ಇತ್ತ ಬೇಟಿ ಕೊಟ್ಟಿಲ್ಲ. ಅಧಿಕಾರಿಗಳಂತೂ ತಲೆಹಾಕಿಲ್ಲ. ಅಭಿವೃದ್ದಿಯ ಕೆಲಸವೂ ಆಗಿಲ್ಲ. ಗ್ರಾಮ ಪಂಚಾಯತ್ ಕೂಡಾ ಇಲ್ಲಿನ ಅಭಿವೃದ್ದಿಯ ಬಗ್ಗೆ ಯೋಚಿಸುತ್ತದೆ ಆದರೆ ಶಕ್ತಿ ಇಲ್ಲದೆ ದಿಕ್ಕೆಟ್ಟು ಕೂತಿದೆ.


ಒಟ್ಟಿನಲ್ಲಿ ಹಳ್ಳಿಯೊಂದರ ಕತೆ ಹೀಗಿರುವಾಗ ಅಭಿವೃದ್ದಿಯ ಮಂತ್ರ ಪಠಿಸುವ ಜನನಾಯಕರಿಗೆ ಇದೆಲ್ಲವೂ ಅರ್ಥವಾಗುತ್ತಿಲ್ಲವೇ ಅಥವಾ ಅಭಿವೃದ್ದಿಯ ನಾಟಕವಾಡುತ್ತಿದ್ದಾರೆಯೇ ಎಂದು ಸಂಶಯ ಹುಟ್ಟಿಸುತ್ತದೆ.ಗ್ರಾಮೀಣ ಭಾಗದ ಅದೆಷ್ಟೂ ಹಳ್ಳಿಗಳು ಇಂದು ಇದೇ ರೀತಿಯಾಗಿ ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ.ಕೆಲವು ಕಡೆ ಸರಿಯಾದ ಬಸ್ಸುಗಳ ವ್ಯವಸ್ಥೆಯಿಲ್ಲ. ಶಾಲಾ ಮಕ್ಕಳು ಸಂಜೆ ಮನೆಗೆ ತಲಪುವಾಗ ದೀಪ ಉರಿಸುವ ಹೊತ್ತಾಗಿರುತ್ತದೆ. ಮರಿದಿನ ಬೆಳಗ್ಗೆ ಮತ್ತೆ ದೀಪ ಆರುವ ಮುನ್ನವೇ ಮನೆಯಿಂದ ಹೊರಬೀಳಬೇಕು ಇಲ್ಲವಾದ್ರೆ ಶಿಕ್ಷಣವೂ ಇಲ್ಲದೆ ಕತ್ತಲಲ್ಲಿರಬೇಕಾಗುತ್ತದೆ. ಎಂತಹ ಅಜಗಜಾಂತರ ...!!. ಒಂದೆಡೆ ಮನೆಬಾಗಿಲಿಗೆ ಮಕ್ಕಳನ್ನು ತಂದು ಬಿಡುವ ಶಿಕ್ಷಣ ಇನ್ನೊಂದು ಕಡೆ ಶಾಲೆಯ ಬಾಗಿಲನ್ನು ಅರಸಿಕೊಂಡು ಹೋಗುವ ಶಿಕ್ಷಣ. ಇಂತಹ ಸಂದಿಗ್ದ ಪರಿಸ್ಥಿತಿ ಇಲ್ಲಿದೆ. ಆದರೂ ಭಾರತ ಶ್ರೀಮಂತ ದೇಶ. ಸುಖೀ ದೇಶ.ನೆಮ್ಮದಿ ಇಲ್ಲಿದೆ.ಏಕೆಂದರೆ ಇದ್ದುದರಲ್ಲೇ ಸಂತೋಷ ಪಡುವ ಸಮಾಜ ನಮ್ಮದು. ಇರುವ ಸಮಸ್ಯೆಯನ್ನು ಹಾಗೆಯೇ ಸ್ವೀಕರಿಸುವ ಗುಣ ನಮ್ಮದು. ಹಾಗಾಗಿ ಸಮಸ್ಯೆಗಳು ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಅದುವೇ ಒಂದು ಅಭ್ಯಾಸವಾಗಿಬಿಡುತ್ತದೆ.